ಹಾಸನ:
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವಕನೊರ್ವ ಬಲಿಯಾದ ಘಟನೆ ನಡೆದಿದೆ.
ಕಾಡಾನೆ ದಾಳಿಗೆ 28 ವರ್ಷದ ಅನಿಲ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕ ಗುಜನಹಳ್ಳಿ ಗ್ರಾಮದವನಾಗಿದ್ದು, ಈತ ಅಣ್ಣಮಲೈ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುವಾಗ ಕಾಡಾನೆ ಏಕಾಏಕಿ ಯುವಕನ ಮೇಲೆ ದಾಳಿ ನಡೆಸಿದೆ. ಕಾಡಾನೆಯು ಸೊಂಡಲಿನಿಂದ ಯುವಕನನ್ನು ಎತ್ತಿ ಬಿಸಾಡಿ ನಂತರ ಕಾಲಿನಿಂದ ತುಳಿದು ಸಾಯಿಸಿದೆ. ವಿಷಯ ತಿಳಿದು ಸ್ಥಳೀಯರು ಹಾಗೂ ಕುಟುಂಬಸ್ಥರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ, ಇನ್ನು ಮೃತ ಯುವಕನ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
ಸ್ಥಳೀಯರು ಹಾಗೂ ಮೃತನ ಕುಟುಂಬಸ್ಥರು ಆನೆ ಹಾವಳಿಯ ವಿರುದ್ದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಕುರಿತು ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.