ಪ್ರತಿವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಫೆ. 4ರಂದು ಆಚರಿಸಲಾಗುವುದು. ದಿನದಿಂದ ದಿನಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಏರುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ 1. 496 972 ಲಕ್ಷ ಕ್ಯಾನ್ಸರ್ ಪ್ರಕರಣಗಳಿವೆ ಎಂದು ಅಂದಾಜಿಸಿದೆ. 'ವಿಶ್ವ ಕ್ಯಾನ್ಸರ್ ದಿನ' ಕ್ಯಾನ್ಸರ್ನಂತಹ ಸವಾಲಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಎದುರಿಸಲು ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ. ಕ್ಯಾನ್ಸರ್ ಬಗ್ಗೆ ವ್ಯಕ್ತಿಗಳಿಗೆ ಶಿಕ್ಷಣ ನೀಡಲು ಮತ್ತು ಕ್ಯಾನ್ಸರ್ ಪೀಡಿತ ರೋಗಿಗಳು ಮತ್ತು ಕುಟುಂಬಗಳನ್ನು ಬೆಂಬಲಿಸಲು ಪ್ರಪಂಚದಾದ್ಯಂತ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಚಟುವಟಿಕೆಗಳನ್ನು ನಡೆಯುತ್ತಲೇ ಇರುತ್ತದೆ.
ಪ್ರತಿ ವರ್ಷ 'ವಿಶ್ವ ಕ್ಯಾನ್ಸರ್ ದಿನ' ಒಂದು ವಿಶೇಷ ಧ್ಯೇಯವಾಕ್ಯವನ್ನು ಅಳವಡಿಸಿಕೊಳ್ಳುತ್ತದೆ. ಇದು ಕ್ಯಾನ್ಸರ್ ಆರೈಕೆಯ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. 2025ರ ವಿಶ್ವ ಕ್ಯಾನ್ಸರ್ ದಿನದ ಥೀಮ್ 'ಯುನೈಟೆಡ್ ಬೈ ಯುನಿಕ್'. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಕಾರಣಗಳನ್ನು ತಪ್ಪಿಸುವ ಮೂಲಕ ಮತ್ತು ಅಸ್ತಿತ್ವದಲ್ಲಿರುವ ಪುರಾವೆ ಆಧಾರಿತ ತಡೆಗಟ್ಟುವ ತಂತ್ರಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರಸ್ತುತ 30 ರಿಂದ 50% ಕ್ಯಾನ್ಸರ್ಗಳನ್ನು ತಡೆಗಟ್ಟಬಹುದಾಗಿದೆ.
ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಮುಖ್ಯ. ನಿಯಮಿತ ತಪಾಸಣೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೊಜ್ಜು ವಿವಿಧ ರೀತಿಯ ಕ್ಯಾನ್ಸರ್ಗಳಿಗೆ ಸಂಬಂಧಿಸಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯ ಗುರಿಯನ್ನು ಹೊಂದುವುದು ಬಹಳ ಮುಖ್ಯ. ಹಾಗೂ ಆರೋಗ್ಯಕರ BMI ಅನ್ನು ಕಾಪಾಡಿಕೊಳ್ಳುವುದು ಅಗತ್ಯ.
ಗರ್ಭಕಂಠ ಮತ್ತು ಇತರ ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುವ HPV ಲಸಿಕೆ ಮತ್ತು ಯಕೃತ್ತಿನ ಕ್ಯಾನ್ಸರ್ನಿಂದ ರಕ್ಷಿಸುವ ಹೆಪಟೈಟಿಸ್ ಬಿ ಲಸಿಕೆಯಂತಹ ಕೆಲವು ರೀತಿಯ ಕ್ಯಾನ್ಸರ್ಗಳನ್ನು ತಡೆಗಟ್ಟಲು ಲಸಿಕೆಗಳು ಸಹಾಯ ಮಾಡುತ್ತವೆ.