ಕೊರಟಗೆರೆ:
ನಮ್ಮ ಜೀವನವಂತೂ ಹೀಗಾಗೋಯ್ತು. ನಮ್ಮ ಮಕ್ಕಳ ಜೀವನ ಹೀಗಾಗೋದು ಬೇಡ. ಅದೆಷ್ಟೇ ಕಷ್ಟ ಬಂದರೂ ತಮ್ಮ ಮಕ್ಕಳನ್ನ ಚೆನ್ನಾಗಿ ಓದಿಸ್ಬೇಕು, ಅವರನ್ನ ದೊಡ್ಡ ವ್ಯಕ್ತಿಯನ್ನಾಗಿ ಮಾಡ್ಬೇಕು ಅನ್ನೋದು ಬಹುತೇಕ ಪೋಷಕರ ಆಸೆಯಾಗಿರುತ್ತೆ. ಈ ಕಾರಣದಿಂದ ಹಳ್ಳಿಯ ಜನರು ಕೂಡ ತಮ್ಮ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಬಡ ಮತ್ತು ಮಧ್ಯಮ ವರ್ಗದ ಜನರನ್ನ ಹುರಿದು ಮುಕ್ಕುತ್ತಿವೆ. ಮಕ್ಕಳ ಜೊತೆಯೂ ಮಾನವೀಯತೆಯನ್ನ ಮರೆತು ವರ್ತಿಸುತ್ತಿವೆ. ಇದೀಗ ಇಂಥದ್ದೇ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಬೆಳಕಿಗೆ ಬಂದಿದೆ.
ಫೀಸ್ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಒಂದಲ್ಲಾ, ಎರಡಲ್ಲಾ..ಬರೋಬ್ಬರಿ ೪೦ ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಕೂರಿಸದೇ ಹೊರಗೆ ಕೂರಿಸಿರುವ ಘಟನೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆ ಗ್ರಾಮ ಪಂಚಾಯ್ತಿಯ ಯಾದಗೆರೆ ಗ್ರಾಮದ ಸೇಂಟ್ ಮೆರಿಸ್ ಶಾಲೆಯಲ್ಲಿ ನಡೆದಿದೆ. ಮುಕ್ಕಾಲು ಭಾಗ ಫೀಸ್ ಕಟ್ಟಿದ್ರೂ ಕೂಡ ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಕೂರಿಸದೇ ಶಾಲೆಯ ಆಡಳಿತ ಮಂಡಳಿ ಶಿಕ್ಷೆ ನೀಡಿದೆ.
ಸೋಮವಾರ ನಡೆದ ಕನ್ನಡ ಮತ್ತು ಮಂಗಳವಾರ ನಡೆದ ಇಂಗ್ಲೀಷ್ ಬಾಷೆಯ ಪರೀಕ್ಷೆಗೆ ಕೂರಿಸದೇ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗಿದೆ. ೧ರಿಂದ ೮ನೇ ತರಗತಿಯ ಒಟ್ಟು ೪೦ಜನ ಶಾಲೆಯ ಆಡಳಿತ ಮಂಡಳಿ ಈ ರೀತಿ ಶಿಕ್ಷೆ ನೀಡಿದೆಯಂತೆ. ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮಕ್ಕಳಿಗೆ ಈ ಶಿಕ್ಷೆಯನ್ನ ವಿಧಿಸಿದ್ದಾರಂತೆ. ಸೆಂಟ್ ಮೇರಿಸ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಇದೀಗ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬಹುತೇಕ ಎಲ್ಲರೂ ಕೂಡ ಮುಕ್ಕಾಲು ಭಾಗ ಫೀಸ್ ಕಟ್ಟಿದ್ದಾರಂತೆ. ಕಾಲು ಭಾಗ ಫೀಸ್ ಬಾಕಿ ಉಳಿಸಿಕೊಂಡಿದ್ದಾರಂತೆ. ಆದ್ರೆ ಅದನ್ನ ಕೂಡ ಕಟ್ಟೋವರೆಗೂ ಪರೀಕ್ಷೆಗೆ ಕೂರಿಸಲ್ಲ ಅಂತಾ ಮುಖ್ಯ ಶಿಕ್ಷಕಿ ಪಟ್ಟು ಹಿಡಿದಿದ್ದಾರಂತೆ. ಫೀಸ್ ಬಗ್ಗೆ ಪೋಷಕರ ಬಗ್ಗೆ ಮಾತನಾಡಬೇಕು, ಅದನ್ನ ಬಿಟ್ಟು ಮಕ್ಕಳ ಜೊತೆ ಹೀಗೆ ನಡೆದುಕೊಂಡ್ರೆ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿರುತ್ತೆ. ಮಕ್ಕಳು ಏನಾದ್ರೂ ಹೆಚ್ಚು ಕಡಿಮೆ ಮಾಡ್ಕೊಂಡ್ರೆ ಯಾರು ಹೊಣೆ ಅಂತಾ ಪೋಷಕರು ಪ್ರಶ್ನಿಸಿದ್ದಾರೆ.
ಇನ್ನು ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ೧ರಿಂದ ೧೦ ತರಗತಿಯವರೆಗೆ ಒಟ್ಟು ೮೯ ವಿದ್ಯಾಥಿಗಳು ವ್ಯಾಸಂಗ ಮಾಡ್ತಿದ್ದಾರಂತೆ. ಆದ್ರೆ ಇಷ್ಟು ಮಕ್ಕಳಿಗೆ ಇರೋದು ಕೇವಲ ನಾಲ್ಕೇ ನಾಲ್ಕು ಶೌಚಾಲಯವಂತೆ. ಗಂಡುಮಕ್ಕಳು ಶೌಚಕ್ಕಾಗಿ ಹೊರಗಡೆ ಹೋಗುವ ಸ್ಥಿತಿಯಿದೆಯಂತೆ. ಇನ್ನು ಶಾಲಾ ಬಸ್ಸಿಗೆ ಸಿಸಿಟಿವಿಯೇ ಇಲ್ವಂತೆ. ಇದರ ಬಗ್ಗೆಯೆಲ್ಲಾ ಕೇಳಿದ್ರೆ ಮುಖ್ಯ ಶಿಕ್ಷಕರು ದುಡ್ಡೇ ಇಲ್ಲಾ ಅನ್ನೋ ಉತ್ತರ ನೀಡ್ತಿದ್ದಾರೆ.
ಇನ್ನು ಶಾಲಾ ಆಡಳಿತ ಮಂಡಳಿ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಮಕ್ಕಳ ವಗಾವಣೆ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನು ಕೊರಟಗೆರೆ ಪಿಎಸ್ಐ ಚೇತನ್ ಗೌಡ ಶಾಲೆಗೆ ತೆರಳಿ ಮುಖ್ಯ ಶಿಕ್ಷಕಿಗೆ ಬುದ್ಧಿವಾದ ಹೇಳಿದ್ದಾರೆ.