ರಾಗಿ ಅಂಬಲಿ (ರಾಗಿ ಮಾಲ್ಟ್) ಕರ್ನಾಟಕದ ಹಲವಾರು ಭಾಗಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಾನೀಯವಾಗಿದೆ. ಕರ್ನಾಟಕ ರಾಗಿ ಉತ್ಪಾದಿಸುವ ಪ್ರಮುಖ ರಾಜ್ಯವಾಗಿದ್ದು, ರಾಗಿ ಅಂಬಲಿ ರಾಜ್ಯಾದ್ಯಂತ ಸುಲಭವಾಗಿ ಲಭ್ಯವಿದೆ. ಈ ರಾಗಿ ಅಂಬಲಿ ಅಥವಾ ಗಂಜಿ ರಾಜ್ಯದ ಹಲವು ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ.
ರಾಗಿ ಅಂಬಲಿಯು ಆರೋಗ್ಯಕರವಾಗಿದ್ದು ಹಲವಾರು ಪ್ರಯೋಜನಗಳನ್ನೊಳಗೋಂಡಿದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದ ಶಾಖವನ್ನು ಕಡಿಮೆ ಮಾಡುತ್ತದೆ. ಬಾಯಿ ಹುಣ್ಣು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಯಾಸಗೊಂಡಾಗ ದೇಹದ ನೀರಿನಾಂಶ ಹೆಚ್ಚಿಸಿ ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ರಾಗಿ ಹಂಬಲಿ ಸೇವಿಸುವುದರಿಂದ ಬಿಪಿ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಮತ್ತು ವೇಗವಾಗಿ ತೂಕವನ್ನು ಇಳಿಸಲು ಸಹಾಯವಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೂ ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಸಹಾಯಕವಾಗಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಕಲಿಕೆಯಲ್ಲಿಯೂ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಾರೆ.
ಪ್ರತಿದಿನ ಬೆಳಿಗ್ಗೆ ಸಾಮಾನ್ಯ ಉಪಹಾರದ ಬದಲು ರಾಗಿ ಅಂಬಲಿ ಕುಡಿಯುವುದರಿಂದ ದಿನವಿಡೀ ನಿಮ್ಮನ್ನು ಸಕ್ರಿಯವಾಗಿರಿಸಿಕೊಳ್ಳಬಹುದು ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ರಾಗಿ ಮಾಲ್ಟ್ನಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳಾದ ಥಯಾಮಿನ್,ರೈಬೋಫ್ಲಾವಿನ್, ನಿಯಾಸಿನ್ ಮತ್ತು ಫೋಲಿಕ್ ಆಮ್ಲಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವು ಅಧಿಕವಾಗಿದೆ. ಒಂದು ಕಪ್ ರಾಗಿ ಮಾಲ್ಟ್ (144 ಗ್ರಾಂ) ಹಿಟ್ಟು 472 ಕ್ಯಾಲೋರಿಗಳು, 10.5 ಗ್ರಾಂ ಪ್ರೋಟೀನ್, 103 ಗ್ರಾಂ ಕಾರ್ಬ್ಸ್ ಮತ್ತು 1.87% ಕೊಬ್ಬನ್ನು ಹೊಂದಿರುತ್ತದೆ.
ರಾಗಿ ಅಂಬಲಿ ತಯಾರಿಸುವುದು ಹೇಗೆಂದರೆ ರಾಗಿ ಪುಡಿಯನ್ನು ನೀರಿಗೆ ಸೇರಿಸಿ ಹಲವಾರು ನಿಮಿಷಗಳ ಕಾಲ ಕುದಿಸಲಾಗುತ್ತದೆ. ಇದು ರಾಗಿ ಅಂಬಲಿಯ ತಿರುಳನ್ನು ರೂಪಿಸುತ್ತದೆ. ಮೊಸರು ಅಥವಾ ಮಜ್ಜಿಗೆ, ಉಪ್ಪು, ಜೀರಿಗೆ, ಇಂಗು ಮುಂತಾದ ಹೆಚ್ಚುವರಿ ಪದಾರ್ಥಗಳನ್ನು ಮಿಶ್ರಣಕ್ಕೆ ಸೇರಿಸಿ ಬೆರೆಸಿ ನಂತರ ಕತ್ತರಿಸಿದ ಈರುಳ್ಳಿ ತುಂಡುಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಇತ್ಯಾದಿಗಳನ್ನು ಸೇರಿಸುವ ಮೂಲಕ ರಾಗಿ ಅಂಬಲಿ ಸವಿಯಲು ಸಿದ್ದ.
ರಾಗಿ ಅಂಬಲಿ ಕರ್ನಾಟಕದ ಹಲವು ಉಪಹಾರ ಗೃಹಗಳಲ್ಲಿ ಲಭ್ಯವಿದೆ. ರಾಗಿ ಮಾಲ್ಟ್ ಮಿಶ್ರಣವು ವಿವಿಧ ಸೂಪರ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಬಿಸಿ ನೀರನ್ನು ಸೇರಿಸುವ ಮೂಲಕ ಈ ಮಿಶ್ರಣವನ್ನು ಬಳಸಿಕೊಂಡು ರಾಗಿ ಅಂಬಲಿ ಸ್ವತಃ ತಯಾರಿಸಲು ಸಾಧ್ಯವಿದೆ.