ಶಾಸಕ ಟಿ.ಬಿ.ಜಯಚಂದ್ರತುಮಕೂರು
ಶಿರಾ ತಾಲೂಕು ರತ್ನಸಂದ್ರ ಗ್ರಾಮ ಪಂಚಾಯಿತಿ ವತಿಯಿಂದ ದೊಡ್ಡ ಗೂಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿಂಥೆಟಿಕ್ ವಾಲಿಬಾಲ್ ಮೈದಾನವನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಇನ್ನು ಉದ್ಘಾಟನೆ ವೇಳೆಯಲ್ಲಿ ಭಾಗವಹಿಸಿದ ಶಾಸಕ ಸ್ವತಃ ವಾಲಿಬಾಲ್ ಪಟು ಕೂಡ ಆಗಿದ್ದು, ವಾಲಿಬಾಲ್ ಆಟ ಆಡುವ ಮೂಲಕ ಆಟದ ಮೈದಾನಕ್ಕೆ ಚಾಲನೆನೀಡಿದರು.
ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇಂತಹ ಹಲವು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು ತಾಲ್ಲೂಕಿನ ಯುವಕರು ದೇಶ, ವಿದೇಶದಲ್ಲಿ ನಮ್ಮ ತಾಲ್ಲೂಕಿನ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ನನ್ನ ಬಯಕೆ ಎಂದು ತಿಳಿಸಿದರು.
ನಂತರ ಅವರು ದೊಡ್ಡಗೂಳ ಕೆರೆ ಹೇಮಾವತಿ ನೀರಿನಿಂದ ತುಂಬಿರುವ ಹಿನ್ನೆಲೆಯಲ್ಲಿ ಧರ್ಮಪತ್ನಿ ನಿರ್ಮಲಾ,ಗ್ರಾಮಸ್ಥರು ಹಾಗೂ ಮುಖಂಡರು ಕಾರ್ಯಕರ್ತರ ಜೊತೆಗೂಡಿ ಗಂಗಾಪೂಜೆ ಕೂಡ ನೆರವೇರಿಸಿ ಬಾಗಿನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೊಡ್ಡಗೂಳ ಗ್ರಾಮಕ್ಕೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆಗೆ ಚಾಲನೆ ನೀಡಿ ಪ್ರಯಾಣಿಸಿದರು. ಹಾಗು ಪದ್ಮಾಪುರ ಗ್ರಾಮದಲ್ಲಿ ಜಲ ಜೀವನ್ ಮೀಷನ್ ಅಡಿಯಲ್ಲಿ ಪೂರ್ಣಗೊಂಡ ಮನೆ ಮನೆ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅನೇಕ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.