ಗುಬ್ಬಿ : ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಗ್ರಾಮದ ನಿವಾಸಿಗಳು

ಗುಬ್ಬಿ :

ಹಳ್ಳಿ- ಹಳ್ಳಿಗಳ ಅಭಿವೃದ್ಧಿಗೆಂದು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೆಲವೊಂದು ಗ್ರಾಮಗಳ ಅಭಿವೃದ್ಧಿ ಇರಲಿ ಆ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಅಂದರೆ ಏನು ಅಂತಾನೇ ಗೊತ್ತಿಲ್ವಂತೆ. ಗುಬ್ಬಿ ತಾಲೂಕಿನ ಕರೇಗೌಡನಹಳ್ಳಿಯ ದಲಿತ ಕಾಲೋನಿಯಲ್ಲಿರೋ ಬೋರ್‌ವೆಲ್‌ಗೆ  ಕರೆಂಟ್‌ ಪೂರೈಕೆ ಮಾಡುವಲ್ಲಿ ವಿಫಲವಾದ ಹಿನ್ನೆಲೆ ಈ ಗ್ರಾಮದ ನಿವಾಸಿಗಳಿಗೆ ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಅಲ್ಲದೇ ಇಲ್ಲಿಯವರೆಗೂ ಈ ಗ್ರಾಮದ ಜನರು ಬಸ್‌ ಅನ್ನೇ ನೋಡದಿರೋದರಿಂದ ದಲಿತ ಕಾಲೋನಿಯ ಕುಟುಂಬಗಳು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕರೇಗೌಡನಹಳ್ಳಿಯ ಜನರ ಪರಿಸ್ಥಿತಿ ಇದಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ನಿವಾಸಿಗಳಿಗೆ ನೀರಿನ ಸಮಸ್ಯೆ ಹಾಗೂ ಬಸ್‌ ಸೌಲಭ್ಯ ಇಲ್ಲದಿದ್ದರೂ ಕೂಡ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮ ಕೈಗೊಂಡಿಲ್ಲವಂತೆ. ಇನ್ನು ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿಯಾಗಿ ಇಲ್ಲದಿರೋದರಿಂದ ಬಸ್‌ ಇಲ್ಲದೇ ನಿತ್ಯ ಶಾಲಾ- ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ನಾಲ್ಕೈದು ಕಿಲೋ ಮೀಟರ್‌ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿ ಇದೆ. ನಾಲ್ಕು ವರ್ಷದಿಂದ ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಸಮಸ್ಯೆ ತಲೆದೋರಿದರೂ ಕೂಡ ಇಲ್ಲಿಯವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಮೌಲಭೂತ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.

ಇನ್ನು ಕುಡಿಯುವ ನೀರಿನ ಸಂಪರ್ಕಕ್ಕೆ ಬೆಸ್ಕಾಂ ಇಲಾಖೆ ಕರೆಂಟ್‌ ಪೂರೈಸಲು ವಿಫಲವಾಗಿದ್ದರ ಬಗ್ಗೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾರಿಕೆ ಉತ್ತರ ಕೊಡ್ತಾ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಇಲಾಖೆಗೆ ಅಲೆದು ಅಲೆದು ಸಾಕಾಗಿದ್ದು, ಕೇವಲ ಕಂಬ ನೆಟ್ಟು ಕೈತೊಳೆದುಕೊಂಡಿದ್ದಾರೆ ಅಷ್ಟೇ ಆದರೆ ಈವರೆಗೂ ತಂತಿ ಹಾಕಿ ಕರೆಂಟ್‌ ಪೂರೈಸಿಲ್ಲ ಎಂದು ರೋಷಾವೇಶ ವ್ಯಕ್ತಪಡಿಸಿದರು. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸಬೇಕಿದೆ.

Author:

...
Shabeer Pasha

Managing Director

prajashakthi tv

share
No Reviews