ಬಟವಾಡಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನತುಮಕೂರು
ತುಮಕೂರು: ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲೆಯಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ಏಕಾದಶಿಯ ಪ್ರಯುಕ್ತ ಪ್ರಮುಖ ದೇಗುಲಗಳಲ್ಲಿ ಬೆಳಗಿನ ಜಾವದಿಂದ ಪಂಚಾಮೃತ ಅಭಿಷೇಕ, ಸಹಸ್ರನಾಮ ಅರ್ಚನೆ, ವಿಶೇಷ ಅಲಂಕಾರ, ಮಹಾಭಿಷೇಕ, ಉತ್ಸವ ಮೂರ್ತಿಯ ಮೆರವಣಿಗೆ, ಪ್ರಾಕಾರೋತ್ಸವ ಹಾಗೂ ಇತರೆ ಕಾರ್ಯಕ್ರಮಗಳು ನೆರವೇರಿದವು, ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಗರದ ಬಟವಾಡಿ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಮೂರ್ತಿಗೆ ತಿರುಪತಿಯಿಂದ ಬಂದಿದ್ದ ಪುರೋಹಿತರು ವಿಭಿನ್ನವಾಗಿ ಅಲಂಕಾರ ಮಾಡಿದ್ದರು. ಗರ್ಭಗುಡಿಯಲ್ಲಿ ದೀಪಗಳನ್ನು ಹಚ್ಚಿ ಶ್ರೀ ವೆಂಕಟೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ದಿನವಿಡೀ ನಿರಂತರವಾಗಿ ಮಂಗಳ ವಾದ್ಯವನ್ನು ನುಡಿಸುವುದು ಬಹಳ ವಿಶೇಷವಾಗಿದೆ.
ದೇವಸ್ಥಾನಗಳನ್ನು ವಿವಿಧ ಹೂವುಗಳು, ಬಾಳೆ ದಿಂಡುಗಳಿಂದ ಸಿಂಗರಿಸಲಾಗಿದೆ. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಲೇ ವೈಕುಂಠ ದ್ವಾರದ ಪ್ರವೇಶ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸಿಲಾಗಿದೆ. ಎಲ್ಲ ದೇವಾಲಯಗಳು ಭಕ್ತರಿಂದ ಭರ್ತಿಯಾಗಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಭಗವಂತನ ದರ್ಶನ ಪಡೆಯುತ್ತಿದ್ದಾರೆ.