27ನೇ ರಾಜ್ಯಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವತುಮಕೂರು
ತುರುವೇಕೆರೆ ತಾಲೂಕಿನ ಮಾಯಸಂದ್ರದ ಟಿಬಿ ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ 27 ನೇ ರಾಜ್ಯ ಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಮತ್ತೊಮ್ಮೆ ಆಹಾರ ಕ್ರಾಂತಿಗೆ ನಾಂದಿ ಹಾಡಬೇಕೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕೃಷಿ ವಿಜ್ಞಾನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜ್ಞಾನದಿಂದ ಎಲ್ಲವನ್ನೂ ಸಾಧಿಸಬಹುದಾಗಿದೆ ಆದರೆ ಛಲವೊಂದು ಬೇಕು. ಎಲ್ಲರಲ್ಲೂ ಸುಪ್ತ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಒರೆ ಹಚ್ಚುವ ಕಾರ್ಯ ಆಗಬೇಕಿದೆ. ಬುದ್ದಿ ಶಕ್ತಿ ಬಳಸಿ ಉತ್ತಮವಾದ ಸಂಶೋಧನೆಯನ್ನು ಮಾಡಬಹುದು. ನಮ್ಮಲ್ಲಿ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ, ಪ್ರಕೃತಿಯ ಕೊಡುಗೆ ಇದೆ. ಸಮಾಜದ ಒಳಿತಿಗಾಗಿ ಬೇಕಾಗುವ ಸವಲತ್ತುಗಳನ್ನು ಆವಿಷ್ಕಾರ ಮಾಡುವ ಮೂಲಕ ಜಗತ್ತಿಗೆ ತಮ್ಮದೇ ಆದ ಕೊಡುಗೆಯನ್ನು ವಿದ್ಯಾರ್ಥಿಗಳು ನೀಡಬೇಕು ಎಂದರು.
ಹವಾಮಾನ ವೈಪರೀತ್ಯದಿಂದಾಗಿ ರೈತಾಪಿಗಳು ಪದೇ ಪದೇ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಇದು ಅವರನ್ನು ಬೇಸಾಯದಿಂದ ದೂರ ಇರಿಸುವಂತೆ ಮಾಡಿದೆ. ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ಕೃಷಿಯಲ್ಲೂ ಬದಲಾವಣೆಗಳನ್ನು ತರಬೇಕಿದೆ ಎಂದು ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳು ಹೇಳಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಬಿಜಿಎಸ್ ಸಭಾಭವನದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಆಶ್ರಯದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಹಾಗೂ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿಯವರು ಸ್ವತಃ ಚೆಸ್ ಆಡುವ ಮೂಲಕ ಉದ್ಘಾಟಿಸಿದರು. ಕೆಲ ಹೊತ್ತು ಚೆಸ್ ಆಡಿದ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪ್ರಸನ್ನನಾಥ ಸ್ವಾಮೀಜಿಯವರಿಗೆ ಸೋಲಿನ ರುಚಿ ತೋರಿಸಿ ತಮ್ಮ ಚಾಣಾಕ್ಷತೆಯನ್ನು ತೋರಿದರು.ಸಸಿ – ಕೃಷಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಆಯುರ್ವೇದದ ಹಲವಾರು ಸಸಿಗಳನ್ನು ಶ್ರೀ ಗಳು ನೆಟ್ಟು ನೀರೆರೆದರು.
ಈ ಸಂಧರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ,ಎಸ್.ವಿ.ಸುರೇಶ್, ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕ ಮನಮೋಹನ್, ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ.ಶಿವಲಿಂಗೇಗೌಡ, ಚುಂಚನಗಿರಿ ಮಠದ ಸಿಇಓ ಎನ್.ಎಸ್.ರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.