ತುರುವೇಕೆರೆ : ಠೇವಣಿ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಠೇವಣಿದಾರರ ಪ್ರತಿಭಟನೆ
ಠೇವಣಿದಾರರ ಪ್ರತಿಭಟನೆ
ತುಮಕೂರು

ತುರುವೇಕೆರೆ : ಠೇವಣಿ ಹಣವನ್ನು ಹಿಂತಿರುಗಿಸುವಂತೆ ಆಗ್ರಹಿಸಿ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಠೇವಣಿದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕೋಳಘಟ್ಟದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 23 ಸಾವಿರ ಮಂದಿ ಷೇರುದಾರರು ಇದ್ದಾರೆ. ಇವರಲ್ಲಿ 115 ಮಂದಿ ಷೇರುದಾರರು 51 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಘದಲ್ಲಿ ಠೇವಣಿ ಇರಿಸಿದ್ದಾರೆ. ಠೇವಣಿ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಸಹ ಸಂಘದಿಂದ ತಮಗೆ ಠೇವಣಿ ಹಣ ಮತ್ತು ಅದಕ್ಕೆ ಬರುವ ಬಡ್ಡಿ ಹಣವನ್ನೂ ನೀಡದೇ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ವೇಳೆ ಮಾತನಾಡಿದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಹಲಿಂಗಯ್ಯ, ಸಹಕಾರ ಸಂಘದ ಪದಾಧಿಕಾರಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಸಂಘದ ಹಿಂದಿನ ಕಾರ್ಯದರ್ಶಿಯೊಬ್ಬರು ಸುಮಾರು 34 ಲಕ್ಷಕ್ಕೂ ಹೆಚ್ಚು ಹಣವನ್ನು ದುರುಪಯೋಗಪಡಿಸಿ ಕೊಂಡಿದ್ದಾರೆಂದು ವರದಿಯಲ್ಲಿ ಬಯಲಾಗಿದೆ ಎಂದು ದೂರಿದರು. ಕೂಡಲೇ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡು ಠೇವಣಿದಾರರಿಗೆ ಹಣ ನೀಡಬೇಕೆಂದು ಆಗ್ರಹಿಸಿದರು.

ಸಂಘದ ಮಾಜಿ ಅಧ್ಯಕ್ಷ ವೆಂಕಟಾಪುರದ ವೀರೇಂದ್ರ ಪಾಟೀಲ್ ಮಾತನಾಡಿ, ಸದ್ಯ ಕೋಳಘಟ್ಟ ಕೃಷಿ ಪತ್ತಿನ ಸಹಕಾರ ಸಂಘ ಸಂಪೂರ್ಣ ನಷ್ಠದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕ್ ಸಂಘದ ನೆರವಿಗೆ ಬಂದು ಠೇವಣಿದಾರರ ಹಣವನ್ನು ಹಿಂತಿರುಗಿಸಲು ಸಹಕಾರ ನೀಡಬೇಕೆಂದು ತಿಳಿಸಿದರು.

ಕೋಳಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಮಾತನಾಡಿ ಸಂಘದಿಂದ ವ್ಯಾಪಾರ ಸಾಲ,  ವೈಯಕ್ತಿಕ ಸಾಲ, ವಾಹನ ಸಾಲ, ಸಂಘಗಳಿಗೆ ಸಾಲ ಸೇರಿದಂತೆ ವಿವಿಧ ಯೋಜನೆಗಳಲ್ಲಿ 41 ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಲಾಗಿದೆ. ಅವುಗಳಲ್ಲಿ ಬಹುಪಾಲು ಮಂದಿ ಸಾಲವನ್ನು ಹಿಂತಿರುಗಿಸಿಲ್ಲ. ಅಲ್ಲದೇ ಬಡ್ಡಿಯನ್ನೂ ಸಹ ಕಟ್ಟಿಲ್ಲ. ಹಾಗಾಗಿ ಠೇವಣಿದಾರರಿಗೆ ಹಣ ನೀಡಲು ಅಸಾಧ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೆ.ಆರ್.ಉಮೇಶ್, ಮಲ್ಲಿಕಾರ್ಜುನ, ಶ್ರೀನಿವಾಸ್, ಯೋಗೀಶ್, ಹೊನ್ನಪ್ಪ, ಕೆ.ಎಂ.ನಾಗರಾಜು, ರಾಜಪ್ಪ, ಚನ್ನಿಗರಾಮಯ್ಯ ಸೇರಿ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Author:

...
Editor

ManyaSoft Admin

Ads in Post
share
No Reviews