ನೀರಗುಂದ ಗ್ರಾಮತುಮಕೂರು
ತುರುವೇಕೆರೆ : ತಾಲೂಕಿನ ನೀರಗುಂದ ಗ್ರಾಮದಲ್ಲಿರೋ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ, ಹೀಗಾಗಿ ಬೇಸತ್ತ ಗ್ರಾಮಸ್ಥರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ಮಹಲಿಂಗಪ್ಪ, ಚಂದ್ರಪ್ಪ, ನಟರಾಜ್, ಓಂ ಶಿವಯ್ಯ, ಶಂಕರಣ್ಣ, ರಮೇಶ್, ಪಟೇಲ್ ದಯಾನಂದ್ ಸೇರಿ ಹಲವಾರು ಮಂದಿ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದರು.
ಗ್ರಾಮದಲ್ಲಿರುವ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಪ್ರತಿದಿನ ಜನರು ಓಡಾಡಲೂ ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ರಸ್ತೆ ತುಂಬಾ ಗುಂಡಿ ಬಿದ್ದಿದ್ದು, ನೀರು ನಿಂತಿವೆ, ಇದರಿಂದ ರಸ್ತೆ ಯಾವುದು ಗುಂಡಿ ಯಾವುದು ಅಂತ ಗೊತ್ತಾಗದೇ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕೇವಲ 300 ಮೀಟರ್ ದೂರ ಕ್ರಮಿಸುವ ರಸ್ತೆ ಸರಿ ಇಲ್ಲದಿರುವುದರಿಂದ ಸುಮಾರು ಐದು ಕಿಲೋ ಮೀಟರ್ ಸುತ್ತಾಡಿಕೊಂಡು ಹೋಗಬೇಕಾದ ದುಸ್ಥಿತಿ ಇದೆ.
ಗ್ರಾಮಕ್ಕೆ ರಸ್ತೆ ಸರಿಯಿಲ್ಲದ ಕಾರಣ ಕೆಎಸ್ ಆರ್ಟಿಸಿ ಬಸ್ ಬಂದು ಎಷ್ಟೋ ವರ್ಷಗಳು ಆಗಿವೆ. ಪ್ರತಿದಿನ ಶಾಲಾ ಕಾಲೇಜಿಗೆ ಹೋಗುವ ಮಕ್ಕಳನ್ನು ಪೋಷಕರು ತಮ್ಮ ವಾಹನಗಳಲ್ಲಿ ಕರೆ ತರಬೇಕಿದೆ. ರಸ್ತೆ ಸರಿಯಿಲ್ಲದ ಕಾರಣ ಬಸ್ ಓಡಿಸಲು ಸಾಧ್ಯವಿಲ್ಲ ಎಂದು ಕೆಎಸ್ ಆರ್ಟಿಸಿ ಬಸ್ ನ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ ಅವರನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ನೀರಗುಂದ ಗ್ರಾಮದಲ್ಲಿ ರಸ್ತೆ ಮತ್ತು ಸೇತುವೆ ಮಾಡಲು ಎರಡು ಮೂರು ಬಾರಿ ಭೂಮಿ ಪೂಜೆ ಮಾಡಲಾಗಿತ್ತು. ಆದರೂ ಸಹ ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ. ಇಲ್ಲಿನ ಸಮಸ್ಯೆ ಗೊತ್ತಿದ್ದೂ ಸಹ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೂಡಲೇ ಸೇತುವೆ ದುರಸ್ಥಿ ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಕೂಡಲೇ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಿಕೊಡದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.