ತುಮಕೂರು :
ದೇಶದಾದ್ಯಂತ ವಕ್ಫ್ ತಿದ್ದುಪಡಿ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಈ ಮಸೂದೆಯನ್ನು ವಿರೋಧಿಸಿ ದೇಶದಲ್ಲಿ ಅಲ್ಲಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದೀಗ ಮುಸ್ಲಿಂ ಬಾಂಧವರು ಕಪ್ಪು ಪಟ್ಟಿಯನ್ನು ಧರಿಸಿ ನಮಾಜ್ ಮಾಡುವ ಮೂಲಕ ಮುಸ್ಲಿಂ ಬಾಂಧವರು ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಪವಿತ್ರ ರಂಜಾನ್ ಮಾಸದ ಜುಮ್ಮಾ ದಿನವಾಗಿರೋ ಇಂದು ಇಡೀ ದೇಶದಾದ್ಯಂತ ಮುಸ್ಲಿಂ ಬಾಂಧವರು ತೋಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು. ತುಮಕೂರಿನಲ್ಲಿಯೂ ಕೂಡ ಮುಸ್ಲಿಂ ಬಾಂಧವರು ಇದೇ ರೀತಿ ಶಾಂತಿಯುತ ಪ್ರತಿಭಟನೆ ನಡೆಸಿದರು. ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಯಲ್ಲಿ ನಮಾಜ್‌ಗೆ ಬಂದಿದ್ದ ಮುಸ್ಲಿಂ ಬಾಂಧವರು ಕಪ್ಪು ಪಟ್ಟಿ ಧರಿಸಿ ಬಂದಿದ್ದರು. ಕಪ್ಪು ಪಟ್ಟಿಯನ್ನು ಧರಿಸಿಯೇ ಪ್ರಾರ್ಥನೆ ಮಾಡಿದರು.
ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಇಂದು ಹೀಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ವಕ್ಫ್ ಆಸ್ತಿ ಮುಸ್ಲಿಂ ಸಮುದಾಯದ ಆಸ್ತಿಯಾಗಿದ್ದು, ಸಮುದಾಯದ ಏಳಿಗೆಗಾಗಿ ಅಲ್ಲಾಹು ಹೆಸರಿನಲ್ಲಿ ಮುಸ್ಲಿಮರು ಉಳಿಸಿಕೊಂಡು ಬಂದಿರುವ ಆಸ್ತಿಯಾಗಿದೆ. ಅದನ್ನು ಮುಟ್ಟುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ. ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನಡೆದಿರುವ ಷಡ್ಯಂತ್ರವಿದು. ಈ ಕಾಯಿದೆ ಸ್ವೀಕಾರಾರ್ಹವಲ್ಲ. ತಿದ್ದುಪಡಿ ಮಸೂದೆ ಅಂಗೀಕಾರವಾಗದಂತೆ ರಾಜ್ಯಸಭೆ ತಿರಸ್ಕರಿಸಬೇಕು ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದರು.
ದೇಶದ ಮುಸ್ಲಿಂ ಸಂಘಟನೆಗಳು ಇದನ್ನು ಪ್ರತಿ ಹಂತದಲ್ಲೂ ವಿರೋಧಿಸುತ್ತಲೇ ಬಂದಿವೆ. ಮುಸ್ಲಿಮರು ಮತ್ತು ಜಾತ್ಯಾತೀತ ಮನಸ್ಥಿತಿಯ ಜನ ಈ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಸರ್ಕಾರಕ್ಕೆ ವಿರೋಧ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಅಂತಾ ಹೇಳಿದರು.
ಒಟ್ಟಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗ್ತಲೇ ಇದೆ. ಇದೀಗ ದೇಶದಾದ್ಯಂತ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಶೇಷವಾಗಿ ಪ್ರತಿಭಟನೆ ನಡೆಸಿದ್ದು, ಈ ಹೋರಾಟ ಇನ್ಯಾವ ಹಂತ ತಲುಪಲಿದೆ ಅನ್ನೋದನ್ನು ಕಾದುನೋಡಬೇಕಿದೆ.