ತುಮಕೂರು :
ಮೂರುವರೆ ವರ್ಷದ ಈ ಮೌಲ್ಯಪ್ರಿಯ ಮನಸ್ವಿ ಟ್ಯಾಲೆಂಟ್ಗೆ, ಆಕೆಯ ಜ್ಞಾಪಕ ಶಕ್ತಿಗೆ ನಾವೆಲ್ಲರೂ ಒಂದು ಸಾರಿ ಸೆಲ್ಯೂಟ್ ಹೊಡೆಯಲೇಬೇಕು. ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ೪೧೬ ಟಾಪಿಕ್ಗಳನ್ನು ತನ್ನ ಮಸ್ತಕ ಅನ್ನೋ ಪುಸ್ತಕದಲ್ಲಿ ಸ್ಟೋರ್ ಮಾಡಿಟ್ಟುಕೊಂಡಿರೋ ಮನಸ್ವಿ, ಅವೆಲ್ಲವುಗಳನ್ನು ಥಟಾ ಅಂತಾ ಹೇಳಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾಳೆ.
ಈ ಪುಟಾಣಿ ತನ್ನ ಟ್ಯಾಲೆಂಟ್ನಿಂದ ಎರಡು ರೆಕಾರ್ಡ್ಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಇಂಡಿಯನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಮತ್ತು ಕಲಾಂ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದ್ದಾಳೆ ಈ ಬಾಲ ಪ್ರತಿಭೆ. ಜಗತ್ತಿನ ೭ ಅದ್ಭುತಗಳು, ೮ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ೮ ಗೃಹಗಳು, ೭ ಖಂಡಗಳು, ಭಾರತದ ೨೮ ರಾಜ್ಯಗಳು, ರಾಜಧಾನಿಗಳು, ೧೬ ಪ್ರಧಾನಿಗಳು, ರಾಷ್ಟ್ರಪತಿಗಳು ಹೀಗೆ ೪೧೬ ವಿಭಾಗದಲ್ಲಿ ಪ್ರತಿಭೆ ಅನಾವರಣ ಗೊಳಿಸಿ ವಿಶ್ವದಾಖಲೆ ಮಾಡಿದ್ದಾಳೆ. ಈಕೆಯ ಪ್ರತಿಭೆಯನ್ನು ಗುರುತಿಸಿದ ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಳೆದ ಫೆಬ್ರವರಿಯಲ್ಲಿ ಪಟ್ಟಿಯಲ್ಲಿ ಹೆಸರು ಸೇರಿಸಿದೆ. ಅದೇ ರೀತಿ ಅಬ್ದುಲ್ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಬಾಲಕಿಗೆ ಪದಕ ನೀಡಿ ಸನ್ಮಾನಿಸಿದೆ.
ಈ ಬಾಲಕಿ ತುಮಕೂರಿನ ಸರಸ್ವತೀಪುರಂ ನಿವಾಸಿ ಸ್ನೇಹಾ ಅವರ ಪುತ್ರಿ. ತಂದೆ-ತಾಯಿ ಇಬ್ಬರೂ ನಾಗಮಂಗಲದಲ್ಲಿ ವಾಸವಿದ್ದು, ಈ ಪುಟಾಣಿ ಮಾತ್ರ ತುಮಕೂರಿನಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದಾಳೆ. ಈ ಮುದ್ದು ಪುಟಾಣಿಯ ಸಾಧನೆಗೆ ಕುಟುಂಬ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆಯೇ ಈ ಮೂರೂವರೆ ವರ್ಷದ ಪುಟಾಣಿ ಮಾಡಿರೋ ಸಾಧನೆ ಸಾಮಾನ್ಯವಾದುದ್ದಲ್ಲ.