ತುಮಕೂರು:
ತುಮಕೂರಿನಲ್ಲಿ ಇಂದು ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಕೈ, ಕಾಲು ತುಂಡುತುಂಡಾದ ಸ್ಥಿತಿಯಲ್ಲಿ ರೈಲ್ವೇ ಹಳಿಯ ಮೇಲೆ ಬಿದ್ದಿದ್ದ ಯುವಕನೋರ್ವ ಕಾಲು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಕೊನೆಗೂ ಜನರೆಲ್ಲ ಸೇರಿ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ, ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ತುಮಕೂರು ನಗರದ ರೈಲ್ವೇ ನಿಲ್ದಾಣದಲ್ಲಿ ನಡೆದಿರೋ ಘೋರ ಅಪಘಾತವಿದು. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಯುವಕ ಅದೇ ರೈಲಿನಡಿ ಸಿಲುಕಿಬಿಟ್ಟಿದ್ದಾನೆ. ಆತನ ಮೇಲೆಯೇ ರೈಲು ಹರಿದ ಪರಿಣಾಮ ಯುವಕನ ದೇಹ ತುಂಡು ತುಂಡಾಗಿಬಿಟ್ಟಿದೆ. ರೈಲು ಹಳಿಯ ಮೇಲೆ ರಕ್ತಸಿಕ್ತವಾಗಿ. ಕೈ,ಕಾಲು ತುಂಡಾದ ಸ್ಥಿತಿಯಲ್ಲಿ ಬಿದ್ದು ಯುವಕ ನರಳಾಡಿದ್ದಾನೆ. ಕಾಲು ಗಂಟೆ ಕಾಲ ಅಲ್ಲೇ ಹಳಿಯ ಮೇಲೆ ಬಿದ್ದಿದ್ರೂ ಯಾರೂ ಆತನನ್ನ ಆಸ್ಪತ್ರೆಗೆ ಸಾಗಿಸಿಲ್ಲ. ರೈಲ್ವೇ ನಿಲ್ದಾಣದಲ್ಲಿಯೇ ಈ ಅಪಘಾತ ನಡೆದರೂ ಹತ್ತಿಪ್ಪತು ನಿಮಿಷ ರೈಲ್ವೇ ಪೊಲೀಸ್ ಕೂಡ ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಬಂದು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಯುವಕ ಸಾವನ್ನಪ್ಪಿದ್ದಾನೆ.
ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ೨೪ ವರ್ಷದ ಛಾಯಾಂಕ್ ಮೃತ ದುರ್ಧೈವಿ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ, ಇಂದು ಅಮ್ಮಸಂದ್ರದಿಂದ ಶಿವಮೊಗ್ಗ ತುಮಕೂರು ಪ್ಯಾಸೆಂಜರ್ ರೈಲಿನಲ್ಲಿ ತುಮಕೂರಿಗೆ ಬಂದಿದ್ದ. ಬೆಂಗಳೂರಿಗೆ ಹೋಗಲು ಬೇರೆ ರೈಲು ಹಿಡಿಯುವ ಬರದಲ್ಲಿದ್ದ ಛಾಯಾಂಕ್, ಆತುರದಲ್ಲಿ ರೈಲಿನಿಂದ ಇಳಿಯುವಾಗ ಈ ದುರ್ಘಟನೆ ಸಂಭವಿಸಿದೆ. ಆಯತಪ್ಪಿ ತಾನು ಬಂದ ರೈಲಿನಡಿಯೇ ಸಿಲುಕಿದ್ದಾನೆ. ಹೀಗಾಗಿ ಈತನ ಮೇಲೆಯೇ ರೈಲು ಹರಿದಿದ್ದು, ದೇಹ ತುಂಡುತುಂಡಾಗಿದೆ. ಕೈಕಾಲುಗಳು ಕಟ್ ಆಗಿ ರಕ್ತಸಿಕ್ತನಾಗಿ ಹಳಿಯ ಮೇಲೆಯೇ ಬಿದ್ದು ನರಳಾಡಿದ್ದಾನೆ. ತುಮಕೂರು ರೈಲ್ವೆ ನಿಲ್ದಾಣದ ೪ನೇ ಫ್ಲಾಟ್ ಫಾರಂನಲ್ಲಿ ಅಪಘಾತ ಸಂಭವಿಸಿದೆ.
ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮೊದಲು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದಾಗಿಲ್ಲ. ಬಳಿಕ ಸ್ಥಳದಲ್ಲಿದ್ದ ಯುವಕನೋರ್ವ ಕೈಕಾಲು ತುಂಡುತುಂಡಾಗಿ ಬಿದ್ದಿದ್ದ ಈ ಯುವಕನ ಬಳಿಯೇ ಆತನ ಕುಟುಂಬಸ್ಥರ ನಂಬರ್ ಪಡೆದು, ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ನಂತರ ಸ್ಥಳೀಯರು, ರೈಲ್ವೇ ಪೊಲೀಸರು ಸೇರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಯುವಕ ಛಾಯಾಂಕ್ ಸಾವನ್ನಪ್ಪಿದ್ದಾನೆ. ಬಳಿಕ ಯುವಕನ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಯುವಕ ತನ್ನ ಪ್ರಾಣಕ್ಕೇ ಕುತ್ತುತಂದುಕೊಂಡಿದ್ದಾನೆ. ಮತ್ತೊಂದೆಡೆ ಈ ಘಟನೆಯಿಂದ ಜನರು ಮಾನವೀಯತೆಯನ್ನೇ ಮರೆತರಾ ಅನ್ನೋ ಪ್ರಶ್ನೆ ಮೂಡ್ತಿದ್ರೆ, ರೈಲ್ವೇ ಪೊಲೀಸರ ಕಾರ್ಯದ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಎದ್ದಿವೆ.