ತುಮಕೂರು : ತುಮಕೂರು ಜನರ ಪಾಲಿಗೆ ಆಪ್ತರಕ್ಷಕನಾದ SOS ಬಟನ್...!

ಸ್ಮಾರ್ಟ್‌ ಸಿಟಿ ವತಿಯಿಂದ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್‌ ಸಿಟಿ ಮ್ಯಾನೇಜ್‌ಮೆಂಟ್‌ ಕಮ್ಯಾಂಡ್‌ ಅಂಡ್‌ ಕಂಟ್ರೋಲ್‌ ಸೆಂಟರ್‌
ಸ್ಮಾರ್ಟ್‌ ಸಿಟಿ ವತಿಯಿಂದ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್‌ ಸಿಟಿ ಮ್ಯಾನೇಜ್‌ಮೆಂಟ್‌ ಕಮ್ಯಾಂಡ್‌ ಅಂಡ್‌ ಕಂಟ್ರೋಲ್‌ ಸೆಂಟರ್‌
ತುಮಕೂರು

ತುಮಕೂರು:

ತುಮಕೂರು ನಗರ ಸ್ಮಾರ್ಟ್‌ ಸಿಟಿ ಖ್ಯಾತಿಗೆ ಪಾತ್ರವಾಗಿದ್ದು, ಈ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬಂದಿದೆ. ನಗರದ ಸುರಕ್ಷತೆಯ ದೃಷ್ಟಿಯಿಂದ ಇದೆ ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ನಗರದಾದ್ಯಂತ ಬರೋಬ್ಬರಿ ೪೧೩ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ೪೦ಕ್ಕೂ ಹೆಚ್ಚು ಕಡೆಗಳಲ್ಲಿ ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ಗಳನ್ನು ಕೂಡ ಅಳವಡಿಸಲಾಗಿದೆ. ಈ ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ಗಳೇ ಇದೀಗ ತುಮಕೂರು ನಗರದ ಜನರ ಪಾಲಿಗೆ ಆಪ್ತರಕ್ಷಕರಂತಾಗಿ ಬದಲಾಗಿದ್ದು, ಸ್ಮಾರ್ಟ್‌ ಸಿಟಿ ಮತ್ತು ಪೊಲೀಸ್‌ ಇಲಾಖೆಯ ಕಾರ್ಯಕ್ಕೆ ಭಾರೀ ಜನಮೆಚ್ಚುಗೆ ವ್ಯಕ್ತವಾಗ್ತಿದೆ.

ನಗರದಾದ್ಯಂತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ಗಳನ್ನು ನಿಗಾವಹಿಸುವ ಕೆಲಸವನ್ನು ಸ್ಮಾರ್ಟ್‌ ಸಿಟಿ ವತಿಯಿಂದ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್‌ ಸಿಟಿ ಮ್ಯಾನೇಜ್‌ಮೆಂಟ್‌ ಕಮ್ಯಾಂಡ್‌ ಅಂಡ್‌ ಕಂಟ್ರೋಲ್‌ ಸೆಂಟರ್‌ ನ ಸಿಬ್ಬಂದಿ ಮಾಡ್ತಿದ್ದಾರೆ. ನಗರದಲ್ಲಿ ಮೂಲೆಮೂಲೆಗಳಲ್ಲಿ ಅಳವಡಿಸಲಾಗಿರುವ ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ ಗಳ ಮೂಲಕ ಯಾರೇ ಸಹಾಯ ಕೇಳಿದರೂ ತಕ್ಷಣಕ್ಕೆ ಅಲ್ಲಿಗೆ ಪೊಲೀಸ್‌ ಸಿಬ್ಬಂದಿಯನ್ನು ಕಳುಹಿಸುವ ಕೆಲಸವನ್ನು ಸ್ಮಾರ್ಟ್‌ ಸಿಟಿ ಸಿಬ್ಬಂದಿ ಮಾಡ್ತಿದ್ದಾರೆ. ಸದ್ಯ ಸ್ಮಾರ್ಟ್‌ ಸಿಟಿ ಸಿಬ್ಬಂದಿ ಮತ್ತು ಪೊಲೀಸರು ಮಾಡಿರುವ ಕೆಲಸದ ವಿಡಿಯೋ ಇದೀಗ ಭಾರೀ ವೈರಲ್‌ ಆಗ್ತಿದೆ.   

ನಗರದ ಮರಳೂರು ದಿಣ್ಣೆಯ ನಾಲ್ಕನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬ ಹೆಂಡತಿಯ ಜೊತೆ ಜಗಳವಾಡಿ ಆಕೆಯನ್ನು ಪುಟ್ಟ ಮಗುವಿನೊಂದಿಗೆ ಆಚೆದಬ್ಬಿದ್ದ. ಮನೆಯಿಂದ ಹೊರದಬ್ಬಲ್ಪಟ್ಟಿದ್ದ ಮಹಿಳೆ ಅಲ್ಲೇ ಮರಳೂರು ದಿಣ್ಣೆಯಲ್ಲಿದ್ದ ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ನಲ್ಲಿದ್ದ ಪ್ಯಾನಿಕ್‌ ಬಟನ್‌ ಒತ್ತಿ, ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಈ ವೇಳೆ ಆಕೆಗೆ ಸ್ಪಂದಿಸಿದ ಸ್ಮಾರ್ಟ್‌ ಸಿಟಿ ಸಿಬ್ಬಂದಿ, ಐದು ನಿಮಿಷ ಅಲ್ಲಿಯೇ ಇರಿ. ಪೊಲೀಸರನ್ನು ಕಳುಹಿಸುತ್ತೀವಿ ಅಂತಾ ಧೈರ್ಯ ತುಂಬಿದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವನ್ನ ಕೂಡ ಮಾಡಿದರು. ಮಾಹಿತಿ ಕೊಟ್ಟ ಐದೇ ನಿಮಿಷಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಿಳೆ ಮತ್ತು ಮಗುವನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗ್ತಿದ್ದು, ಪೊಲೀಸರು ಮತ್ತು ಸ್ಮಾರ್ಟ್‌ ಸಿಟಿ ಸಿಬ್ಬಂದಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

ಇನ್ನೊಂದೆಡೆ ನಿನ್ನೆ ಶಿರಾ ಗೇಟ್‌ ಬಳಿ ವ್ಯಕ್ತಿಯೊಬ್ಬ ಏಕಾಏಕಿ ಮೂರ್ಚೆ ಬಂದು ರಸ್ತೆಯಲ್ಲೇ ಬಿದ್ದುಹೋಗಿದ್ದ. ಈ ವೇಳೆ ಅಲ್ಲಿಯೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಎಮರ್ಜೆನ್ಸಿ ಬಟನ್‌ ಒತ್ತಿ ಮಾಹಿತಿ ತಿಳಿಸಿದರು. ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಆಂಬುಲೆನ್ಸ್‌ ಕಳುಹಿಸಿ ಮೂರ್ಚೆ ಬಂದು ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಮತ್ತು ಎಮರ್ಜೆನ್ಸಿ ಕಾಲಿಂಗ್‌ ಬಾಕ್ಸ್‌ಗಳು ನಗರವಾಸಿಗಳ ಪಾಲಿಗೆ ಆಪ್ತರಕ್ಷಕರಂತಾಗಿದ್ದು, ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟೋದಕ್ಕೂ ಅನುಕೂಲಕರವಾಗ್ತಿವೆ.

Author:

...
Editor

ManyaSoft Admin

Ads in Post
share
No Reviews