ತುಮಕೂರು :
ತುಮಕೂರು ಜಿಲ್ಲೆಯ ಕುಂಕುಮನಹಳ್ಳಿ ಗ್ರಾಮದ ಸುತ್ತ ಮುತ್ತ ಗ್ರಾಮಸ್ಥರ ಆರಾಧ್ಯ ದೈವವಾದ ಲಕ್ಷ್ಮೀ ನರಸಿಂಹ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ಪ್ರತಿವರ್ಷ ಶ್ರೀರಾಮ ನವಮಿ ಹಬ್ಬದ ಅಂಗವಾಗಿ ಈ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವಕ್ಕೆ ಕುಂಕುಮನಹಳ್ಳಿ ಗ್ರಾಮ ಸೇರಿ ಕಂಭತ್ತನಹಳ್ಳಿ, ಮಲ್ಲಸಂದ್ರ, ಹೆಗ್ಗೆರೆ, ದೊಡ್ಡ ಸಾರಂಗಿ, ರಂಗಯ್ಯನಪಾಳ್ಯ ಸೇರಿ ಸುತ್ತಮುತ್ತಲ ಗ್ರಾಮವನ್ನು ಕಾಯುತ್ತಿರುವ ನರಸಿಂಹ ಸ್ವಾಮಿ ರಥೋತ್ಸವಕ್ಕೆ ತುಮಕೂರು, ಬೆಂಗಳೂರು ಸೇರಿ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿದರು.
ಸುಮಾರು 5 ದಿನಗಳ ಕಾಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರಾ ಅಂಗವಾಗಿ ಹೋಮ, ಹವನ, ವಿಶೇಷ ಪೂಜೆ ಕೈಂಕಾರ್ಯಗಳು ಜರುಗಿದವು. ಅಲ್ಲದೇ ಇಂದು ದೇಗುಲಕ್ಕೆ ಹಾಗೂ ರಥಕ್ಕೆ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಇನ್ನು ಮುಂಜಾನೆಯಿಂದಲೂ ಹೋಮ ನಡೆದಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಗರುಡ ದೇವನ ಆಗಮನದೊಂದಿಗೆ ರಥ ಎಳೆಯಲಾಯಿತು. ಗರುಡ ದೇವ ರಥದ ಸುತ್ತ ಮೂರು ಬಾರಿ ಪ್ರದಕ್ಷಣೆ ಹಾಕಿದ ಬಳಿಕ ರಥೋತ್ಸವ ಜರುಗುವುದು ವಿಶೇಷವಾಗಿತ್ತು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಂಡರು.
ಇನ್ನು ಜಾತ್ರೆಗೆ ಬರುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಏರ್ಪಡಿಸಿಲಾಗಿತ್ತು. ಜೊತೆಗೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಭಕ್ತರಿಗೆ ವಿತರಿಸಲಾಯಿತು.