ತುಮಕೂರು:
ತುಮಕೂರಿನ ಪ್ರಖ್ಯಾತ ಪ್ರವಾಸಿ ತಾಣ, ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರೋ ದೇವರಾಯನದುರ್ಗದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತ್ರೆಯ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಶುಭ್ ಕಲ್ಯಾಣ್ ಅವರು ಪೂರ್ವಭಾವಿ ಸಭೆಯನ್ನು ನಡೆಸಿದರು.
ಕರಿಗಿರಿ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರೋ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಜಾತ್ರೆಯು ಮಾರ್ಚ್ 6ರಿಂದ 18ರವರೆಗೆ ಜರುಗಲಿದೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಇದರ ಕುರಿತು ನಗರದ ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಡಿ.ಸಿ ಶುಭಕಲ್ಯಾಣ್ ಅವರು ಜಾತ್ರೆಯ ಪೂರ್ವ ಭಾವಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ, ತೊಂದರೆಗಳು ಆಗದಂತೆ, ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.