ತುಮಕೂರು :
ಭಾರತ ಮತ್ತು ಪಾಪಿ ಪಾಕಿಸ್ತಾನ ನಡುವಣ ಸಂಘರ್ಷ ದಿನೇದಿನೇ ಹೆಚ್ಚಾಗ್ತಲೇ ಇದೆ. ಉಭಯ ರಾಷ್ಟ್ರಗಳ ನಡುವೆ ಎರಡು ಮೂರು ದಿನಗಳ ಕಾಲ ದಾಳಿ-ಪ್ರತಿದಾಳಿ ನಡೆದಿತ್ತು. ನಿನ್ನೆ ಸಾಯಂಕಾಲ ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಒಪ್ಪಿಗೆಯ ಮೇರೆಗೆ ಕದನ ವಿರಾಮವನ್ನು ಘೋಷಿಸಲಾಗಿತ್ತು. ಆದರೆ ನರಿಬುದ್ಧಿ ಬಿಡದ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡುವ ಕೆಲಸ ಮಾಡಿತ್ತು. ಇದರಿಂದಾಗಿ ಮತ್ತೆ ಯುದ್ಧದ ಛಾಯೆ ಆವರಿಸಿದ್ದು, ದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇಂದು ತುಮಕೂರಿನಲ್ಲಿಯೂ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದು, ಜನಸಂದಣಿ ಇರುವ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ನಡುವೆ ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ರೈಲ್ವೇ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆಯೇ ರೈಲ್ವೇ ನಿಲ್ದಾಣ ಭೇಟಿ ಕೊಟ್ಟ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ರೈಲ್ವೇ ನಿಲ್ದಾಣವನ್ನು ಕಂಪ್ಲೀಟ್ ಆಗಿ ಪರಿಶೀಲನೆ ನಡೆಸುವ ಕೆಲಸ ಮಾಡಿತು. ರೈಲು ನಿಲ್ದಾಣದ ಫ್ಲಾಟ್ ಫಾರಂಗಳ ಮೂಲೆ ಮೂಲೆಯಲ್ಲಿಯೂ ತಪಾಸಣೆ ನಡೆಸಿದರು. ಪ್ರಯಾಣಿಕರ ಬ್ಯಾಗ್ ಗಳು, ಲಗೇಜ್ ಗಳನ್ನು ಕೂಡ ತಪಾಸಣೆ ನಡೆಸಲಾಯಿತು. ಬಳಿಕ ರೈಲ್ವೇ ನಿಲ್ದಾಣದ ಮುಂಭಾಗ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಯಿತು.