ಪ್ರಜಾಶಕ್ತಿ Tv ತುಮಕೂರು: ಪ್ರವಾಸೋದ್ಯಮ ಅಭಿವೃದ್ಧಿಯ ತಾಣವಾಗಿರುವ ತುಮಕೂರು ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ, ವಾರಾಂತ್ಯ ರಜೆಗಳನ್ನು ಹಾಯಾಗಿ ಕಳೆಯುವಂತೆ ಮಾಡಲು ಸಹಕಾರಿಯಾಗಿದೆ. ಕೇಂದ್ರವು ಹತ್ತು ಹಲವು ಆಕರ್ಷಕ ಹಾಗೂ ಭೇಟಿ ನೀಡಲು ಯೋಗ್ಯವಾದ ತಾಣಗಳನ್ನು ಹೊಂದಿರುವ ತವರಾಗಿದೆ.
ತುಮಕೂರು ಎಂದರೆ ಏನು ಎಂಬ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವೇ ಸಿಗಲಿಲ್ಲ. ಮದುವೆ ಮಾಡಿಕೊಳ್ಳಬೇಕೆಂದರೆ ರಾಜನಿಗೆ ಸುಂಕ ತೆರುತ್ತಿದ್ದ ವಿಶಿಷ್ಟ ಪದ್ಧತಿಯ ತುಮಕೂರು ಅನೇಕ ವೈಶಿಷ್ಟತೆ ಹೊಂದಿದೆ. ಈಗ ಸಣ್ಣ ಹಳ್ಳಿಗಳಂತಿರುವ ಎಂ.ಎಸ್.ಕೋಟೆ, ನಿಟ್ಟೂರು ವ್ಯಾಪಾರ, ವಹಿವಾಟು ಕೇಂದ್ರಗಳಿದ್ದವು. ಆಗ ಕೆಲ ಮನೆಗಳ ಊರು. ಯಾವುದೇ ಪ್ರಸಿದ್ಧಿಳಿಲ್ಲದ ತುಮಕೂರು ಮುಂದೆ ಜಿಲ್ಲಾ ಕೇಂದ್ರವಾಗಿದ್ದು ಈ ಊರಿನ ಶಕ್ತಿ ಮತ್ತು ಹೆಮ್ಮೆ.
224 ವರ್ಷಗಳ ಹಿಂದೆ ತುಮಕೂರು ಪ್ರವೇಶಿಸಿದ ಪ್ರವಾಸಿಗ ಫ್ರಾನ್ಸಿಸ್ ಬುಖಾನನ್‌ಗೆ ತುಮಕೂರಿನಲ್ಲಿ ನೋಡಲು ಏನೇನು ಇರಲಿಲ್ಲ. ಶಿರಾಗೇಟ್ ದಾಟಿ ಆತ ಮುಂದೆ ಬಂದಾಗ ಚಿಕ್ಕಪೇಟೆಯಲ್ಲೊಂದು ಕೋಟೆ ಇತ್ತಂತೆ. ಬೆರಳೆಣಿಕೆ ಮನೆಗಳು, ರಾಗಿ ಹೊಲಗಳು ಇಷ್ಟೇ ಕಂಡಿದ್ದು.
ತುಮಕೂರು ಜೈನ, ಬೌದ್ಧರ ತಾಣವಾಗಿತ್ತು. ಉಗಾರದ ಪಾಯಸಾಗರರು ಚಿಕ್ಕಪೇಟೆಯ ಹೆಂಚಿನ ಮನೆಯೊಂದರಲ್ಲಿ ಜಿನಾಲಯ ಸ್ಥಾಪಿಸಿದ್ದರು. ಈಗ ಮಂದರಗಿರಿ ಕ್ಷೇತ್ರ ಜೈನರ ಪ್ರಮುಖ ಕೇಂದ್ರ. ಜಿಲ್ಲೆಯ ಅತ್ಯಂತ ಹಳೆ ಶಾಸಕ (ಕ್ರಿ.ಶ.400) ಈಗಿನ ಮೆಳೆಕೋಟೆಯಲ್ಲಿ ಸಿಕ್ಕಿದೆ. ಗಂಗದೊರೆ ಮಾಧವವರ್ಮ ಬೌದ್ಧ ಧರ್ಮೀಯರಿಗೆ ಭೂದಾನ ಮಾಡಿದ ವಿವರಗಳಿವೆ. ಹಾಗಾಗಿ ಈಗಲೂ ನಾಗಾರ್ಜುನ ಎಂಬ ಹೆಸರಿನ ಹಳ್ಳಿ ಇಲ್ಲಿದೆ.
ಆಗಿನ ಚಿಕ್ಕಪೇಟೆಯೇ ಈಗಿನ ತುಮಕೂರು. ಚಿಕ್ಕಪೇಟೆಯಲ್ಲಿ ಕೋಟೆಯ ಅವಶೇಷಗಳು ಈಗಲೂ ಇವೆ. ಅಲ್ಲೊಂದು ನೆಲದೊಳಗಿನ ಮಠ ಗಮನ ಸೆಯುತ್ತದೆ. ಸಮುದ್ರ ಮಟ್ಟದಿಂದ 2669 ಅಡಿ ಎತ್ತರ ಇರುವ ತುಮಕೂರಿನಲ್ಲಿ ಆಗ ಜೈನ, ಬೌದ್ಧ, ಕ್ರಿಶ್ಚಿಯನ್ನರು ಸಾಕಷ್ಟು ಸಂಖ್ಯೆಯಲ್ಲೇ ಇದ್ದರು. ಈಗಿನ ಬನಶಂಕರಿ ಆಗಿನ ಬನ್ನೇಮ್ಮನ ಕೆರೆ. ವರ್ಷಕ್ಕೊಮ್ಮೆ ಬೌದ್ಧ ಸನ್ಯಾಸಿಗಳು ಬೀಡು ಬಿಡುತ್ತಿದ್ದ ತಾಣವಂತೆ. ಈಗ ಆ ಕರುಹೂ ಇಲ್ಲಿಲ್ಲ.
ತುಮಕೂರಿನಲ್ಲಿ ಕುರುಬ, ತಿಗಳರ ಧರ್ಮ ಪೀಠಗಳಿದ್ದವು ಎಂದರೆ ನಂಬಲು ಕಷ್ಟವಲ್ಲವೇ? ಹಿಂದುಳಿದವರ ಪ್ರಜ್ಞೆಗೆ ಸಾಕ್ಷಿಯಾಗಬೇಕಾಗಿದ್ದವು. ಪ್ರಸಿದ್ಧ ಶಿವಶರಣರಾದ ಸಿದ್ದರಾಮ, ತೋಂಟದ ಸಿದ್ದಲಿಂಗ ಯತಿಗಳು ಮತ್ತು ಅಟವೀ ಸ್ವಾಮೀಜಿಗಳು ಈ ಭಾಗದಲ್ಲಿ ಧರ್ಮ ಪ್ರಚಾರ ಮಾಡಿದ್ದರು. ಈಗಲೂ ಬೆಳಗುಂಬದಲ್ಲಿ ಸಿದ್ಧರಾಮರ ಗದ್ದುಗೆಯೇ ಇದೆ.
ದೇವರಾಯನ ದುರ್ಗದಲ್ಲಿ ಚಿಕ್ಕದೇವರಾಜ ಒಡೆಯರು ಕೋಟೆ ನಿರ್ಮಿಸಿದ್ದರು. ಏಳು ಬಾಗಿಲಿದ್ದ ಕೋಟೆ ಈಗಿಲ್ಲ. ಇದು ಜಯಮಂಗಲಿ, ಗರುಡಾಚಲ, ಶಿಂಷಾ ನದಿಗಳ ಉಗಮ ಸ್ಥಾನವೂ ಹೌದು. ಆದರೆ ಈಗ ಈ ನದಿಗಳ ವೈಭವ ನೆನಪಿಗೂ ಸಿಗದಷ್ಟು ಮಾಸಿ ಹೋಗಿವೆ. ಆದರೆ ಈ ನದಿಗಳ ಉಳಿವೆ ಯಾರೂ ಪ್ರಯತ್ನಿಸಿದರೂ ಕಾಣುತ್ತಿಲ್ಲ.
ಮಂತ್ರಿಗೊಳಿ ಬಾಚಿದೇವ ತನ್ನ ರಾಣಿ ಭೀಮವ್ವನ ನೆನಪಿಗಾಗಿ ಭೀಮವ್ವ ಜಿನಾಲಯ, ಭೀಮಸಮುದ್ರ ಕೆರೆ ಕಟ್ಟಿಸಿದ. ಈ ಭೀಮಸಮುದ್ರ ಕೆರೆಯೇ ಈಗಿನ ಭೀಮಸಂದ್ರ. ಕೋಡಿ ಬಸವೇಶ್ವರ ದೇವಾಲಯದ ಮುಂದಿನ ಕಲ್ಲಿನ ಕಂಬವನ್ನು ಮಲ್ಲಿಶೆಟ್ಟಿಯ ಮಗ ಪರ್ವತನಾಯಕ ತನ್ನ ತಂದೆ-ತಾಯಿಗಳಿಗೆ ಶುಭವಾಗಲಿ ಎಂದು ಸ್ಥಾಪಿಸಿದ. ಪರ್ವತ ನಾಯಕ ತುಮಕೂರು ಪ್ರಾಂತ್ಯದ ಅಧಿಪತಿ.
ಹೊಸಪೇಟೆಯಲ್ಲಿರುವ ದೇಶದ ಗರಡಿ ಮನೆ ಕಂಡವರಿಗೆ ಏನೇನು ಅನಿಸದೇ ಇರಬಹುದು . ಇದು ಒಂದು ಕಾಲದ ತುಮಕೂರಿನ ಕುಸ್ತಿಯ ಐತಿಹ್ಯವನ್ನು ಸಾರುತ್ತದೆ. ಚಿಕ್ಕಪೇಟೆ, ಹೂರಪೇಟೆ ಆಗ ಪೇಟೆ ಎನ್ನುತ್ತಿದ್ದರು. ಪೇಟೆಯಲ್ಲಿ ಕುಸ್ತಿ ಕಾಳಗ ನೋಡಲು ಸಾವಿರಾರು ಜನ ಸೇರುತ್ತಿದ್ದರು ಎಂದನ್ನು ಇತಿಹಾಸದ ಪುಟಗಳು ಸಾರುತ್ತವೆ.
ಈಗಿನ ಚಿಕ್ಕಪೇಟೆ ಅಗ್ರಹಾರ, ಕೈದಾಳ, ಚಿನಗ, ಚಿನಿವಾರ, ಬೆಳ್ಳಿಬಟ್ಟಲ ಹಳ್ಳಿ, ಮಂಚಕಲ್‌ಕುಪ್ಪೆ, ಹಿರೇಗುಂಡ್‌ಗಲ್, ಹಿರೇಹಳ್ಳಿ, ತುಮಕೂರಿನ ಅತಿ ಪ್ರಾಚೀನ ಹಳ್ಳಿಗಳು. ಕೈದಾಳ, ಗೊಳೂರು ಒಳಗೊಂಡ ತುಮಕೂರಿಗೆ ಹಿಂದೆ ಕ್ರೀಡಾಪುರ ಎಂಬ ಹೆಸರಿತ್ತು ಎನ್ನುತ್ತಾರೆ ಇತಿಹಾಸಕಾರರು.
ಈಗಲೂ ಕೈದಾಳದ ಚನ್ನಕೇಶವ ದೇವಾಲಯ ಗಮನ ಸೆಳೆಯುತ್ತದೆ. ಶಿಲ್ಪಿ ಡಕಣಾಚಾರಿ ಹುಟ್ಟೂರು ಎಂಬ ಐತಿಹ್ಯವಿದೆ. ಗೋಳೂರಿನ ಗಣಪತಿಯ ಕಥೆ ಈ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಪಠ್ಯವಾಗಿದ್ದನ್ನು ನೋಡಬಹುದು.
ದೇವದುರ್ಗಕ್ಕೆ ಬಂದಿದ್ದ ಶಂಕರಾಚಾರ್ಯರು ವಿದ್ಯಾಶಂಕರ ದೇವಾಲಯ ಸ್ಥಾಪಿಸಿದರು. ಶ್ರೀರಾಮ, ಸೀತಾ, ಲಕ್ಷ್ಮಣರು ನಾಮದಚಿಲುಮೆಗೆ ಆಗಮಿಸಿದ್ದರು ಎಂಬ ಕಥೆಯಿದೆ. ದೇವರಾಯನದುರ್ಗದಲ್ಲಿರುವ ಯೋಗ, ಬೋಗ ನರಸಿಂಹಸ್ವಾಮಿ ದೇವಸ್ಥಾನ, ¨Éಟ್ಟದ ಮೇಲಿನ ಸೌಂದರ್ಯ ತುಮಕೂರಿನ ಜಾಗತಿಕ ಹೆಮ್ಮೆಗೆ ಹಿಡಿದ ಕನ್ನಡಿ. ಇಲ್ಲಿ ಕಾಗೆ ಹಾರಾಡುವುದಿಲ್ಲ ಎಂಬುದೇ ಮತ್ತೊಂದು ಕೌತುಕ.
ಗೊಳೂರು ಸಿದ್ದವೀರಣ್ಣನ್ನೊಡೆಯ ಶೂನ್ಯ ಸಂಪಾದನೆ ಹೆಸರಾಗಿದೆ. ಕಸ್ತೂರಿಯ ದೇವ ಇಲ್ಲಿನ ವಚನಕಾರ. ಬೆಳ್ಳಾವಿಯ ನರಹರಿಶಾಸ್ತ್ರಿ, ಬೆಳ್ಳಾವೆ ವೆಂಕಟನಾರಾಯಣಪ್ಪ, ಹೆಬ್ಬೂರಿನ ಹೇರಂಬ ಕವಿ, ಬಿ.ಶಿವಮೂರ್ತಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದರು. ಕೀರ್ತನಾಕಾರರು ಇಲ್ಲಿದ್ದರು.
ಎಂ.ವಿ.ರಾಮ್‌ರಾವ್, ವೀ.ಸಿ. ನಂಜುಂಡಯ್ಯ, ಆರ್.ಎಸ್.ಆರಾಧ್ಯ, ಟಿ.ಕೆ.ಗೋವಿಂದರಾಜು, ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮ ಗಾಂಧೀಜಿ ಅವರು ಈಗಿನ ಪುರಾತನ 130 ವರ್ಷ ಹಳೆಯದಾದ ಬ್ರಿಟಿಷ್ ಕಾಲದ ಸರಕಾರಿ ಕಾಲೇಜಿನಲ್ಲಿ ತಂಗಿದ್ದರು. ಭೂದಾನ ಚಳವಳಿಯ ವಿನೋಬಭಾವೆ ಅವರನ್ನೂ ತುಮಕೂರು ಸೆಳೆದಿತ್ತು. ಎಂಪ್ರೆಸ್ ಕಾಲೇಜಿನಲ್ಲಿ ತಂಗಿದ್ದ ಅವರು ಭಾಷಣ ಮಾಡಿ ಪಾದಯಾತ್ರೆ ನಡೆಸಿದ್ದರು.
ಟಿ.ಎನ್,ಮಹದೇವಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಚಿಕ್ಕವೀರಯ್ಯ ಸಣ್ಣಗುಡ್ಡಯ್ಯ, ಕಾಶಿ ವಿಶ್ವನಾಥಶೆಟ್ಟಿ, ಕೆ.ಬಿ.ಸಿದ್ದಯ್ಯ, ಟಿ.ಸುನಂದಮ್ಮ, ಕಮಲಾ ಹಂಪನಾ, ಸುಲೋಚನಾದೇವಿ ಆರಾಧ್ಯ. ಛಾಯಾದೇವಿ ನಂಜಪ್ಪ ಸೇರಿದಂತೆ ಅನೇಕ ಸಾಹಿತಿಗಳು ತುಮಕೂರಿನ ಹೆಮ್ಮೆ. 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನzÀ°è ಆಗ ಅಧ್ಯಕ್ಷರಾಗಿದ್ದವರು ಜ್ಞಾನ ಪೀಠ ಪುರಸ್ಕೃತರಾದ ಯು.ಆರ್.ನಂತಮೂರ್ತಿ.
ಕೆರೆಗಳ ಬೀಡೆಂದು ಕರೆಯಲ್ಪಡುವ ತುಮಕೂರಿನಲ್ಲಿ 114 ಶಾಸಕನಗಳು ಸಿಕ್ಕಿವೆ. ಅಮಾನಿಕೆರೆಯನ್ನು ಗುಬ್ಬಿ ಹೊಸಹಳ್ಳಿಯ ಮಹಾನಾಡ ಪ್ರಭುಗಳು ಜೀರ್ಣೋದ್ದಾರ ಮಾಡಿದ್ದರು ಎಂದು ಟಿ.ಬೇಗೂರಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಈಗಲೂ ಶಾಸನವಿದೆ.
ಸೀಬಿ ಕ್ಷೇತ್ರದಲ್ಲಿ ನರಸಿಂಹಸ್ವಾಮಿ ದೇವಾಲಯದ ವರ್ಣಚಿತ್ರಕಲೆಯು ವರ್ಣ ಚಿತ್ರ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ದಾಸೋಹ ಶಿಕ್ಷಣ ದಾಸೋಹದ ಸಿದ್ಧಗಂಗಾ ಕ್ಷೇತ್ರ ಸಾರ್ವಕಾಲಿಕ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.
ಈಗಿನ ಜಿಲ್ಲಾಧಿಕಾರಿಗಳ ಕಚೇರಿಗೆ (ಈಗ ಹೊಸ ಕಟ್ಟಡವಾಗಿದೆ) ಬ್ರಿಟಿಷರ ಬಂಗಲೆಯಾಗಿತ್ತು. ಒಂದನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳು ಇರುತ್ತಿದ್ದರು. ಕಚೇರಿ ನೆಲಕ್ಕೆ ರತ್ನಗಂಬಳಿ ಹಾಸಲಾಗಿತ್ತು. ಜಿಲ್ಲಾಧಿಕಾರಿ ಮನೆ ಬಿಟ್ಟರೆ ಹಸಿರು ಧ್ವಜ ಹಾರಿಸುತ್ತಿದ್ದರು. ಮನೆಯಲ್ಲೇ ಇದ್ದರೆ ಕೆಂಪುಧ್ವಜ ಹಾರುತಿತ್ತಂತೆ. ಆದರೆ ಈಗ ನೆನಪಿಗಾಗಿ ಅಲ್ಲಿರುವುದು ಗಡಿಯಾರ ಮಾತ್ರ!
ಇಂತಹ ಐತಿಹಾಸಿಕ ಹಿನ್ನೆಲಯುಳ್ಳ ತುಮಕೂರು 21ನೇ ಶತಮಾನದ ತಾಂತ್ರಿಕ ಪ್ರಗತಿಯ ಓಟದಲ್ಲಿ ಹಿಂದೆ ಬಿದ್ದಿಲ್ಲ. ತುಮಕೂರು ಬೆಂಗಳೂರು ನಗರಕ್ಕೆ ಸಮನಾಗಿ ಬೆಳೆಯುತ್ತಿದ್ದು ಶಿಕ್ಷಣ, ಸಾರಿಗೆ, ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ದಾಪುಗಾಲು ನೋಡಬಹುದು.