ತುಮಕೂರು ನಗರ ಪೊಲೀಸ್ ಠಾಣೆತುಮಕೂರು
ತುಮಕೂರು:
ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಾಟ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಮೈಕ್ರೋ ಫೈನಾನ್ಸ್ ಜೊತೆಗೆ ಬಡ್ಡಿದಂಧೆ ಸಾಕಷ್ಟು ಸದ್ದು ಮಾಡ್ತಿದ್ದು, ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಡ್ಡಿ ಆಮಿಷಕ್ಕೆ ಒಳಗಾಗಿ ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಚೀಟಿ ವ್ಯವಹಾರದಲ್ಲಿ ಮೋಸಗಳು ಹೆಚ್ಚಾಗ್ತಿದ್ರು ಕೂಡ ಜನರು ಚೀಟಿಯಿಂದ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ ಅಂತಾ ಚೀಟಿ ಹಾಕಿ ಮೋಸ ಹೋಗುತ್ತಲೇ ಇದ್ದಾರೆ. ಈಗ ಇಂತಹದ್ದೇ ಒಂದು ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಹೆಚ್ಚು ಬಡ್ಡಿ ದುಡ್ಡು ಕೊಡ್ತೀವಿ ಅಂತೇಳಿ ನೂರಾರು ಜನರಿಗೆ ಉಂಡೇ ನಾಮ ಹಾಕಿ ಕೋಟ್ಯಾಂತರ ರೂಪಾಯಿ ದೋಚಿ ಜ್ಯೂವೆಲರಿ ಶಾಪ್ ಮಾಲೀಕ ಪರಾರಿಯಾಗಿದ್ದಾನೆ. ಹೌದು ನಗರದ ಪ್ರತಿಷ್ಠಿತ ಜ್ಯೂವೆಲ್ಲರಿ ಶಾಪ್‌ಗಳಲ್ಲಿ ಒಂದಾಗಿರೋ ಆಕಾಶ್ ಜ್ಯೂವೆಲರಿ ಶಾಪ್ ಮಾಲೀಕ ಶಿವಾನಂದ ಮೂರ್ತಿ ನೂರಾರು ಮಂದಿಗೆ ವಂಚಿಸಿ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಜಿ.ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿರೋ ಆಕಾಶ್ ಜ್ಯೂವೆಲರಿ ಶಾಪ್ ಮಾಲೀಕ ಶಿವಾನಂದ ಮೂರ್ತಿ ಜ್ಯೂವೆಲ್ಲರಿ ಶಾಪ್ ಜೊತೆಗೆ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದ ಎನ್ನಲಾಗಿದೆ.
ದುಪ್ಪಟ್ಟು ಬಡ್ಡಿ ಕೊಡ್ತೀವಿ ಅಂತೇಳಿ ನಗರದ ಜನರ ಜೊತೆ ಚೀಟಿ ವ್ಯವಹಾರ ನಡೆಸುತ್ತಿದ್ದ ಶಿವಾನಂದ ಮೂರ್ತಿ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದು, ಅನುಮಾನಗೊಂಡ ಗ್ರಾಹಕರು ವಿಚಾರಿಸಿದಾಗ ಚೀಟಿ ಹಣದೋಚಿ, ಪತ್ನಿ ಪೂರ್ಣಿಮಾ, ಮಗ ಆಕಾಶ್ ಜೊತೆ ಎಸ್ಕೇಪ್ ಆಗಿರೋದು ಬಯಲಾಗಿದೆ. ನಗರದ ಕುವೆಂಪು ನಗರದಲ್ಲಿ ಆರೋಪಿ ಶಿವಾನಂದ ಮೂರ್ತಿ ವಾಸವಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರೋ ಬಗ್ಗೆ ತಿಳಿದುಬಂದಿದೆ. ಇನ್ನು ಇತ್ತೀಚೆಗೆ "ಆಕಾಶ ಸೌಹಾರ್ದ ಕೋ ಆಪರೇಟಿವ್ ಸೋಸೈಟಿಯನ್ನು" ಕೂಡ ಶಿವಾನಂದಮೂರ್ತಿ ಸ್ಥಾಪಿಸಿದ್ದು, ಈ ಮೂಲಕ ಚೀಟಿ ವ್ಯವಹಾರ ನಡೆಸುತ್ತಿದ್ದು, ಅಲ್ಲಿಯ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಶಿವಾನಂದ ಮೂರ್ತಿ ಮಗ ಆಕಾಶ್, ನಾರಾಯಣ ಹೃದಯಾಲಯದಲ್ಲಿ ವೈದ್ಯರಾಗಿ ಕೆಲಸ ಮಾಡ್ತಾ ಇದ್ದಾರಂತೆ, ಇತ್ತ ಮಾಲೀಕ ಶಿವಾನಂದ ಮೂರ್ತಿ ಕೂಡ ಚೆನ್ನಾಗಿ ಸಂಪಾದನೆ ಮಾಡ್ತಾ ಇದ್ರು ಕೂಡ ಜನರ ಹಣವನ್ನು ದೋಚಿ ಪರಾರಿಯಾಗಿರೋದು ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ.
ಈ ಸಂಬಂಧ ಸೊಸೈಟಿ ಆಡಳಿತ ಮಂಡಳಿಯು ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜ್ಯೂವೆಲರಿ ಶಾಪ್ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಣದ ವಿಚಾರವಾಗಿ ಬಡವರು ಮೋಸ ಹೋಗ್ತಾ ಇದ್ದು, ಸರ್ಕಾರ ಹಣದ ವ್ಯವಹಾರ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.