ತುಮಕೂರು: ಡೆಡ್ ಲೈನ್‌ ಗೂ ಕ್ಯಾರೆ ಅನ್ನದ ಅಧಿಕಾರಿಗಳು | ತುಮಕೂರು ಬಂದ್ ಗೆ ಸಜ್ಜು..!

ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರುಣ್‌ ಕುಮಾರ್‌
ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರುಣ್‌ ಕುಮಾರ್‌
ತುಮಕೂರು

ತುಮಕೂರು:

ತುಮಕೂರಿನಲ್ಲಿ ಅಂಗಡಿಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಮಾಡುವಂತೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರರು, ಬೀದಿ ಬದಿ ವ್ಯಾಪಾರಸ್ಥರು ಸೇರಿ ಹಲವು ಸಂಘಟನೆಗಳು ಫೆಬ್ರವರಿ 7 ರಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಗರದ ಟೌನ್‌ಹಾಲ್‌ ಸರ್ಕಲ್‌ನಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ಮೂಲಕ ತೆರಳಿ ಡಿಸಿಗೆ ಮನವಿ ಪತ್ರ ಸಲ್ಲಿಸಿದ್ದರು. ಅಲ್ಲದೇ ಪಾಲಿಕೆ ಆಯುಕ್ತರಿಗೂ ಕೂಡಲೇ ಅಂಗಡಿಗಳಲ್ಲಿದ್ದ ಇಂಗ್ಲೀಷ್ ನಾಮಫಲಕಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದರು. ಒಂದು ವೇಳೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕೂಡ ಎಚ್ಚರಿಕೆ ನೀಡಿತ್ತು.

ಆದರೆ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಜಿಲ್ಲಾಧಿಕಾರಿ ಆಗಲಿ, ಪಾಲಿಕೆ ಆಯುಕ್ತರಾಗಲಿ ಅಥವಾ ಯಾವುದೇ ಅಧಿಕಾರಿಯಾಗಲಿ ನಮ್ಮ ಮನವಿಯನ್ನು ಸ್ವೀಕರಿಸಿ, ಸಭೆ ಕರೆದು ಚರ್ಚೆ ನಡೆಸಿಲ್ಲ, ಹೀಗಾಗಿ ಕನ್ನಡ ಪರ ಸಂಘಟನೆ ಮತ್ತೊಂದು ಹೋರಾಟ ನಡೆಸಲು ಸಜ್ಜಾಗಿದೆ. ಹೌದು ಈ ಬಗ್ಗೆ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರುಣ್‌ ಕುಮಾರ್‌ ಪ್ರಜಾಶಕ್ತಿ ಟಿವಿಯೊಂದಿಗೆ ಮಾತನಾಡಿದ್ದು, ಈವರೆಗೂ ಅಧಿಕಾರಿಗಳು ನಮ್ಮನ್ನು ಕರೆದು ಸಭೆ ಮಾಡಿಲ್ಲ, ಅಲ್ಲದೇ ಈವರೆಗೂ ಇಂಗ್ಲೀಷ್‌ ಬೋರ್ಡ್‌ಗಳನ್ನು ತೆಗೆದು ಹಾಕುವ ಕ್ರಮವನ್ನು ಕೈಗೊಂಡಿಲ್ಲ. ಈ ಬಗ್ಗೆ ವಾಟಾಳ್‌ ನಾಗರಾಜ್‌ ಹತ್ತಿರ ಚರ್ಚೆ ಮಾಡಿದ್ದು, ಶೀಘ್ರವೇ ತುಮಕೂರು ಬಂದ್‌ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಈ ವೇಳೆ ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿರೋ ಬಸವರಾಜು ಮಾತನಾಡಿ, ಪಾಲಿಕೆ ವ್ಯಾಪ್ತಿಗೆ ಬರುವ ಅಂಗಡಿ ಮುಂಗಟ್ಟುಗಳಲ್ಲಿರೋ ಇಂಗ್ಲೀಷ್‌ ಬೋರ್ಡ್‌ಗಳನ್ನು ತೆಗೆದುಹಾಕಬೇಕೆಂದು ಇಷ್ಟು ದಿನ ಡೆಡ್‌ಲೈನ್‌ ಕೊಟ್ಟಿದ್ದರು ಕೂಡ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Author:

share
No Reviews