ತುಮಕೂರು : ತುಮಕೂರು ನಗರ ಹೇಳಿಕೇಳಿ ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರೋ ನಗರ. ಅದೆಷ್ಟೋ ಉದ್ದಿಮೆಗಳು, ಕಾರ್ಖಾನೆಗಳು, ಕಂಪನಿಗಳು ದೈತ್ಯಕಾರವಾಗಿ ಬೆಳೆದು ನಿಂತಿವೆ. ಉದ್ಯೋಗ ಹರಸಿ ನಾನಾ ಭಾಗಗಳಿಂದ ತುಮಕೂರಿಗೆ ಬರುತ್ತಾರೆ. ಹೀಗಾಗಿ ತುಮಕೂರಿನಲ್ಲಿ ಭೂಮಿ ರೇಟು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಭೂಮಿಯನ್ನು ಲಪಟಾಯಿಸಲು ಭೂಕಳ್ಳರು ಸ್ಕೆಚ್ ಹಾಕಿಕೊಳ್ತಾ ಇದ್ದಾರೆ. ಇದೀಗ ನಗರದ ಹೃದಯಭಾಗದಲ್ಲಿರೋ ಸರ್ಕಾರಿ ಜಾಗಕ್ಕೆ ಕ್ರೈಸ್ತ ಮಿಷನರಿಗಳು ಕನ್ನ ಹಾಕ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಗರದ ಶಿರಾಗೇಟ್ನ ಸರ್ವೇ ನಂಬರ್ 200ರಲ್ಲಿ ಸುಮಾರು 22 ಎಕರೆ 23 ಗುಂಟೆ ಸರ್ಕಾರಿ ಜಾಗ ಇದ್ದು, ನೂರಾರು ವರ್ಷಗಳಿಂದ ಆಟದ ಮೈದಾನವಾಗಿ ಹಾಗೂ ಪೂರ್ವಜರು ನಾಗರ ಪೂಜೆಗೆಂದು ಈ ಜಾಗವನ್ನು ಉಪಯೋಗ ಮಾಡಿಕೊಳ್ತಾ ಇದ್ರು. ಈಗಾಗಲೇ ಈ ಜಾಗದಲ್ಲಿ ಸಾಕಷ್ಟು ಭೂಮಿಯನ್ನು ಭೂಗಳ್ಳರು ಹಾಗೂ ಕ್ರೈಸ್ತ ಮಿಷನರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದೀಗ ಚರ್ಚ್ ಸುತ್ತ ಅನಧಿಕೃತವಾಗಿ ಕಾಂಪೌಂಡ್ ನಿರ್ಮಿಸುತ್ತಿದ್ದು, ಈ ಜಾಗ ಸರ್ಕಾರಕ್ಕೆ ಸೇರಿದ್ದು ಈ ಜಾಗವನ್ನು ಉಳಿಸಿ ಎಂದು ಸಾಮಾಜಿಕ ಹೋರಾಟಗಾರರು ಹೋರಾಟ ಮಾಡ್ತಾ ಇದ್ದಾರೆ.
ಇನ್ನು ಕ್ರೈಸ್ತರು ಶಿರಾಗೇಟ್ನ ಸರ್ವೇ ನಂಬರ್ 200ರಲ್ಲಿ ಸಾಕಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡು ಈಗಾಗಲೇ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಈಗ ನಾಗರಪೂಜೆ ಮಾಡ್ತಿದ್ದ ಜಾಗ ಹಾಗೂ ಆಟದ ಮೈದಾನದಲ್ಲಿ ಕ್ರೈಸ್ತ ಮಿಷನರಿಗಳು ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡ್ತಾ ಇದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ಗೂಂಡಾಗಳನ್ನು ಕರೆಸಿ ಹೆದರಿಸ್ತಾ ಇದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಇನ್ನು ಈ ಜಾಗವನ್ನು ಭೂಗಳ್ಳರು ಕಬಳಿಸ್ತಾ ಇರೋ ಬಗ್ಗೆ ಸುಮಾರು 6 ವರ್ಷಗಳಿಂದಲೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ, ಈವರೆಗೂ 4 ಮಂದಿ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ, ಆದರೆ ಈ ಬಗ್ಗೆ ಕ್ರಮ ಮಾತ್ರ ಯಾರೂ ಕೈಗೊಳ್ಳುತ್ತಿಲ್ಲ. ಭೂ ಕಬಳಿಕೆಗೆ ಅಧಿಕಾರಿಗಳೇ ಸಾಥ್ ನೀಡಿದರಾ ಎಂಬ ಅನುಮಾನ ಕೂಡ ಮೂಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರರಾದ ಜಿ.ಎಸ್ ಬಸವರಾಜು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ಈಗಿನ ಡಿಸಿಗೂ ಮನವಿ ಸಲ್ಲಿಸಿದ್ದು, ಕೋರ್ಟ್ಗೂ ಕೂಡ ಮೊರೆ ಹೋಗ್ತೀವಿ ನಮಗೆ ನ್ಯಾಯ ಬೇಕು ಎಂದರು. ಅಲ್ಲದೇ ಅಕ್ರಮವಾಗಿ ಕಬಳಿಕೆ ಆಗ್ತಿರೋ ಜಾಗ ಉಳಿಯಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಅದ್ಯಾವಾಗ ಕಬಳಿಕೆ ಆಗ್ತಿರೋ ಜಾಗದ ಉಳಿವಿಗಾಗಿ ಡಿಸಿ ಬಳಿ ಸಾಮಾಜಿಕ ಹೋರಾಟಗಾರರು ಓಡೋಡಿ ಬಂದ್ರೋ. ಕೂಡಲೇ ಅನಧಿಕೃತವಾಗಿ ಕಾಪೌಂಟ್ ಕಟ್ಟುತ್ತಿದ್ದ ಜಾಗಕ್ಕೆ ಎಸಿ, ತಹಶೀಲ್ದಾರ್ ರಾಜೇಶ್ವರಿ, ಇನ್ಸ್ಪೆಕ್ಟರ್ ಅವಿನಾಶ್ ಸೇರಿ ಅನೇಕ ಮಂದಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಹಾಗೂ ಹೋರಾಟಗಾರರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಈ ಜಾಗದ ಸೂಕ್ತ ದಾಖಲಾತಿ ಒದಗಿಸೋವರೆಗೂ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಅಧಿಕಾರಿಗಳು ಖಡಕ್ ಸೂಚನೆ ಕೊಟ್ಟಿದ್ದಾರೆ.
ಈ ಮೂಲಕ ಸಾಮಾಜಿಕ ಹೋರಾಟಗಾರರಿಗೆ ಮೊದಲ ಜಯ ಸಿಕ್ಕಂತಾಗಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಶಿರಾಗೇಟ್ನ ಸರ್ವೇ ನಂಬರ್ 200 ರ ಜಾಗ ಸರ್ಕಾರಿ ಜಾಗನಾ ಅಥವಾ ಕ್ರೈಸ್ತ ಮಿಷನರಿಗಳಿಗೆ ಸೇರಿದ್ದಾ ಎಂಬುದನ್ನು ಪರಿಶೀಲಿಸಿ ಭೂಗಳ್ಳರ ಕೈಯಿಂದ ಜಾಗವನ್ನು ಉಳಿಸಿಕೊಡಬೇಕಿದೆ.