ಮಾದರಿ ಮನೆಗಳುತುಮಕೂರು
ತುಮಕೂರು : ಶಿರಾ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಎರಡು ಮಾದರಿ ಮನೆಗಳನ್ನು ನಿರ್ಮಿಸಿದ್ದು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡ್ತಾ ಇತ್ತು. ಜೊತೆಗೆ ಮಾದರಿ ಮನೆಯಲ್ಲಿ ಶೌಚಾಲಯವನ್ನು ಕೂಡ ನಿರ್ಮಾಣ ಮಾಡಲಾಗಿತ್ತು, ಆದ್ರೀಗ ಮಾದರಿ ಮನೆಗಳು ಶಿಥಿಲಾವಸ್ಥೆ ತಲುಪಿದ್ದು, ಕಟ್ಟಡದಲ್ಲಿ ಬಿರುಕು ಬಿಟ್ಟಿವೆ. ಹಾಗೂ ಮನೆಯ ಸುತ್ತ ಮುಳ್ಳು ಕಂಟಿ ಗಿಡಗಳು ಬೆಳೆದು ನಿಂತಿದ್ದು, ಉಪಯೋಗಕ್ಕೆ ಬಾರದಂತಾಗಿದೆ.
ಒಂದು ಮನೆ ಕಟ್ಟಿ ಕೊಳ್ಳುವುದು ಪ್ರತಿಯೊಬ್ಬರ ಕನಸಾಗಿದ್ದು, ಮನೆ ಕಟ್ಟಲು ಜೀವಮಾನ ಪೂರ್ತಿ ಕಷ್ಟಪಡುತ್ತಾರೆ, ಹೀಗಾಗಿ ಜನರಿಗೆ ಮಾದರಿ ಮನೆಯನ್ನು ಕಡಿಮೆ ವೆಚ್ಚದಲ್ಲಿ ಹೇಗೆ ಮನೆಯನ್ನು ನಿರ್ಮಿಸಿಕೊಳ್ಳಬಹುದು ಎಂಬುದರ ಕುರಿತು ತಾಲೂಕು ಪಂಚಾಯಿತಿ ಅರಿವು ಮೂಡಿಸುತ್ತಿದೆ. ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಯಡಿ ಮಾದರಿ ಮನೆ ನಿರ್ಮಾಣ ಹೇಗೆ ಎಂಬುದನ್ನು ತೋರಿಸಲು ಯೋಜನೆ ರೂಪಿಸಿದೆ. ಆದರೆ ಈ ಮಾದರಿ ಮನೆಗಳು ಈಗ ದುಸ್ತಿತಿಯಲ್ಲಿರೋದು ಕಂಡು ಬಂದಿದೆ. ಶಿರಾ ತಾಲೂಕಿನ ಪಂಚಾಯತ್ ಆವರಣದಲ್ಲಿ ಇಲಾಖೆ ಎರಡು- ಮೂರು ವರ್ಷಗಳ ಹಿಂದೆ ಮಾದರಿ ಮನೆಗಾಗಿ ನಿರ್ಮಿಸಿದ್ದ ಕಟ್ಟಡಗಳು ಈಗ ಅನಾಥ ಸ್ಥಿತಿಯಾಗಿ ಬಿದ್ದಿವೆ.
ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ, ಮನೆಗಳನ್ನು ಮಾದರಿಯಾಗಿ ಇಟ್ಟುಕೊಂಡು ಮನೆ ನಿರ್ಮಿಸುವ ಉದ್ದೇಶ ಹೊಂದಿತ್ತು. ನಂತರ ಸರ್ಕಾರ ಈ ಮಾದರಿ ಮನೆಗಳನ್ನು ಸುಸ್ಥಿಯಲ್ಲಿಡಲು ನಿರ್ಲಕ್ಷವಹಿಸಿದೆ. ತಾಲೂಕಿಗೆ ಮಾದರಿಯಾಗಿದ್ದ ಕಟ್ಟಡಗಳು, ಕಣ್ಮರೆಯಾಗುವ ಆತಂಕ ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಜೊತೆಗೆ ಶೌಚಾಲಯ ಬೀಗ, ಬಾಗಿಲಿಗೆ ಗೆದ್ದಲು ಹುಳುಗಳು ಮತ್ತು ಪೈಪ್ ಲೈನ್ ಒಡೆದು ಶೌಚಾಲಯ ನೀರು ಹೊರಗೆ ಬರುತ್ತಿದ್ದು ಪಾಳು ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.