ಎಐಟಿಯುಸಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆತುಮಕೂರು
ತುಮಕೂರು: ಜಿಲ್ಲಾ ಕಾರ್ಮಿಕ ಅಧಿಕಾರಿಯ ವಿರುದ್ಧ ಇಂದು ಕಾರ್ಮಿಕರ ಕಿಚ್ಚು ಜೋರಾಗಿತ್ತು. ಈ ಅಧಿಕಾರಿಯ ಕಾರ್ಯವೈಖರಿಯನ್ನ ವಿರೋಧಿಸಿ ಇಂದು ನೂರಾರು ಮಂದಿ ಕಾರ್ಮಿಕರು ಒಂದಾಗಿದ್ದರು. ಕಾರ್ಮಿಕರ ಪರವಾಗಿ ಕೆಲಸ ಮಾಡಬೇಕಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾರ್ಮಿಕ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ. ಅವರಿಂದ ಜಿಲ್ಲೆಯ ಕಾರ್ಮಿಕರಿಗೆ ಅನುಕೂಲವಾಗುವ ಬದಲು ಅನಾನುಕೂಲವಾಗುತ್ತಿದೆ. ಹೀಗಾಗಿ ಇಂತಹ ಕಾರ್ಮಿಕ ವಿರೋಧಿ ಅಧಿಕಾರಿ ತೇಜಾವತಿ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ನೂರಾರು ಕಾರ್ಮಿಕರು ಎಐಟಿಯುಸಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಕಾರ್ಮಿಕರು ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾರ್ಮಿಕ ಅಧಿಕಾರಿ ತೇಜಾವತಿಯವರ ಕಾರ್ಯವೈಖರಿ ಸರಿಯಿಲ್ಲ. ಅವರಿಂದ ಜಿಲ್ಲೆಯ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಅವರು ಕಾರ್ಮಿಕ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ಈ ಹಿನ್ನಲೆ ಅವರನ್ನು ಕೂಡಲೇ ಅಧಿಕಾರದಿಂದ ಅಮಾನತುಗೊಳಿಸಬೇಕೆಂದು ಎಐಟಿಯುಸಿ ಮುಖಂಡರು ಆಗ್ರಹಿಸಿದರು.
ಈ ವೇಳೆ ಎಐಟಿಯುಸಿ ಮುಖಂಡ ಮಾತನಾಡಿ, ತೇಜಾವತಿಯವರು ಕಂಪನಿಗಳ ಮಾಲೀಕರಿಗೆ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಯಾವುದೇ ಸಮಸ್ಯೆಯನ್ನು ಅವರು ಬಗೆಹರಿಸುತ್ತಿಲ್ಲ. "ಇದನ್ನು ಪ್ರಶ್ನಿಸುವ ಕಾರ್ಮಿಕರನ್ನು ಅವಮಾನಿಸುವ ಕೆಲಸ ಮಾಡ್ತಿದ್ದಾರೆ. ಇಂತಹ ಅಧಿಕಾರಿ ನಮ್ಮ ತುಮಕೂರು ಜಿಲ್ಲೆಗೆ ಬೇಡ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು" ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಮಾತನಾಡಿ, ಕಾರ್ಮಿಕರ ವಿರುದ್ಧ ದುರಾಡಳಿತ ನಡೆಸುತ್ತಿರುವ ಅಧಿಕಾರಿ ತೇಜಾವತಿಯನ್ನು ಅಮಾನತ್ತುಗೊಳಿಸಬೇಕೆಂದು ಇಂದು ಹೋರಾಟ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ದುಡಿಯುವ ನಾಲ್ಕು ಲಕ್ಷ ಜನರಿದ್ದಾರೆ. ರೈಸ್ ಮಿಲ್ ಗಳಲ್ಲಿ ಕೆಲಸ ಮಾಡುವ 10 ಸಾವಿರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ವಿವಿಧ ಇಲಾಖೆಯಲ್ಲಿ ಕಾರ್ಮಿಕರ ನೋವಿನ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ ನಾವು ಅವರ ಗಮನಕ್ಕೆ ತಂದರೆ, ನೀವು ಯಾರು? ಅಲ್ಲಿ ಹೋಗಿ ಪ್ರಶ್ನೆ ಮಾಡಲು ನೀವು ಯಾರು? ಎಂದು ಕಾರ್ಮಿಕರ ಮುಖಂಡರಿಗೆ ಅವಮಾನ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ಸರ್ಕಾರ ಕೂಡಲೇ ವಜಾಗೊಳಿಸಬೇಕಾಗಿದೆ. ಹಾಗೆಯೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಮಿಕ ಮುಖಂಡರು ಕಾರ್ಮಿಕ ಅಧಿಕಾರಿ ತೇಜಾವತಿಯವರ ವಿರುದ್ಧ ಧಿಕ್ಕಾರವನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಕಾರ್ಮಿಕ ವಿರೋಧಿ ಅಧಿಕಾರಿ ತೊಲಗಲಿ ಅಂತಲೂ ಘೋಷಣೆ ಕೂಗಿದರು.