ತಿಪಟೂರು:
ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಹೇಳಿಕೇಳಿ ಕೊಬ್ಬರಿಗೆ ಫುಲ್ ಫೇಮಸ್. ಹೀಗಾಗಿ ತೆಂಗಿನಕಾಯಿಯಿಂದ ಹಲವು ಉಪ ಉತ್ಪನ್ನಗಳನ್ನು ತಯಾರು ಮಾಡುವ ಕಾರ್ಖಾನೆಗಳು ತಲೆಎತ್ತಿವೆ. ಆದರೆ ಈ ಕಾರ್ಖಾನೆಗಳಿಂದಲೇ ಈಗ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಗೆದ್ಲೇಹಳ್ಳಿ ಗ್ರಾಮದ ಸರ್ವೇ ನಂಬರ್ 32ರ ವ್ಯಾಪ್ತಿಯಲ್ಲಿ ಸುಮಾರು 12 ತೆಂಗಿನ ಕಾಯಿ ಫ್ಯಾಕ್ಟರಿಗಳಿದ್ದು, ಈ ಫ್ಯಾಕ್ಟರಿಯಿಂದ ಬರುವ ಕಲುಷಿತ ನೀರನ್ನು ಫ್ಯಾಕ್ಟರಿಯ ಪಕ್ಕದಲ್ಲಿರೋ ಹಳ್ಳಕ್ಕೆ ಬಿಡಲಾಗ್ತಿದೆ. ಈ ಹಳ್ಳದಿಂದ ಕಲುಷಿತ ನೀರು ಕೆರೆಗೆ ಹರಿಯುತ್ತಿದೆ. ಇದರಿಂದ ಕೆರೆಯ ನೀರು ಕಲುಷಿತವಾಗ್ತಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ.
ಇನ್ನು ಹಳ್ಳದ ಪಕ್ಕದಲ್ಲಿಯೇ ಜಲಜೀವನ್ ಮಿಷನ್ನಡಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಹೊಸದಾಗಿ ಬೋರ್ವೆಲ್ ಅನ್ನು ಕೂಡ ಕೊರೆಸಲಾಗಿದೆ. ಆದರೆ ಒಂದು ವೇಳೆ ಬೋರ್ಗೆ ಮೋಟರ್ ಬಿಟ್ಟು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದರೆ, ಈ ಕಲುಷಿತ ನೀರನ್ನೇ ಗ್ರಾಮಸ್ಥರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಈಗಾಗಲೇ ನಿಮ್ಮ ಪ್ರಜಾಶಕ್ತಿ ಟಿವಿ ವರದಿಯನ್ನು ಬಿತ್ತರಿಸಿತ್ತು. ಪ್ರಜಾಶಕ್ತಿ ಟಿವಿಯಲ್ಲಿ ವರದಿ ಬಿತ್ತರವಾಗ್ತಿದ್ದಂತೆ ಪಿಡಿಓ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಿ ಫ್ಯಾಕ್ಟರಿಗಳಿಗೆ ನೋಟೀಸ್ ಕೂಡ ನೀಡಿದ್ದರು. ಆದರೆ ನೊಟೀಸ್ ಕೊಟ್ಟರೂ ಈ ಫ್ಯಾಕ್ಟರಿಯವರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈಗಲೂ ಕೂಡ ಕಲುಷಿತ ನೀರನ್ನು ಕೆರೆಗೆ ಹರಿಬಿಡ್ತಾ ಇದ್ದು, ಇದನ್ನು ಪ್ರಶ್ನಿಸಿದವರಿಗೆ ನೀವ್ ಏನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ. ನಿಮಗೆ ಏನೂ ಮಾಡಿಕೊಳ್ಳೋಕಾಗಲ್ಲ ಅಂತಾ ಅಹಂಕಾರದ ಮಾತುಗಳನ್ನಾಡ್ತಿದ್ದಾರಂತೆ.
ಇನ್ನು ಈ ಬಗ್ಗೆ ಗ್ರಾಮಸ್ಥರು ಕೇಂದ್ರ ಸಚಿವ, ಸಂಸದ ಸೋಮಣ್ಣಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಫ್ಯಾಕ್ಟರಿಗಳಿಂದ ಹೊರಬೀಡುತ್ತಿರುವ ಕಲುಷಿತ ನೀರು ಕೆರೆಯನ್ನು ಸೇರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಲಜ್ಜೆ ಬಿಟ್ಟಿರೋ ಫ್ಯಾಕ್ಟರಿ ಮಾಲೀಕರಿಂದ ಗ್ರಾಮಸ್ಥರಿಗೆ ಭಾರೀ ಆತಂಕ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕಿದೆ.