ದೇವನಹಳ್ಳಿ:
ಋಣನೂ ಬಂದ ರೂಪೇಣ, ಪತಿ- ಪತ್ನಿ ಸುತಾಲಯ ಅನ್ನೋ ಮಾತು ಕೇಳಿರ್ತೀವಿ. ಋಣನೂ ಬಂಧದಿಂದಲೇ ಮದುವೆ ನಿಶ್ಚಯವಾಗಿದೆ ಅಂತಾ ಸಂಭ್ರಮದಿಂದ ಮದುವೆ ತಯಾರಿ ನಡೆದಿರುತ್ತೆ. ಆದರೆ ಚಿಕ್ಕ ಚಿಕ್ಕ ವಿಚಾರಗಳಿಗೆ ಮದುವೆ ಮಂಟಪದಲ್ಲಿ ಮದುವೆಗಳು ನಿಂತು ಹೋಗುತ್ತಿರೋ ಘಟನೆಗಳು ಆಗ್ಗಾಗೆ ವರದಿ ಆಗುತ್ತಲೇ ಇರುತ್ತವೆ. ಮದುವೆ ನಿಂತು ಹೋಗೋ ಘಟನೆಗಳನ್ನು ನೋಡಿದ್ರೆ ಜನ ಹೀಗೂ ಇರ್ತಾರಾ ಅಂದುಕೊಳ್ಳೋದು ಉಂಟು. ಮದುವೆ ನಿಂತು ಹೋಗುವ ಹಿಂದೆ ಪ್ರೀತಿ, ಪ್ರೇಮಗಳಂತಹ ವಿಚಾರಗಳು ಒಂದ್ಕಡೆ ಇದ್ರೆ.. ಮದುವೆ ಊಟ ಸರಿ ಇಲ್ಲ ಅಂತಾ ಅದೆಷ್ಟೋ ಮದುವೆಗಳು ಕೂಡ ನಿಂತು ಹೋಗಿವೆ. ಇನ್ನೇನು ಹೊಸ ಬಾಳಿಗೆ ಕಾಲಿಡಬೇಕು ಅನ್ನೋವಷ್ಟರಲ್ಲಿ ಹಲವರ ಬಾಳಲ್ಲಿ ಬಿರುಗಾಳಿಯೇ ಸೃಷ್ಟಿಯಾಗಿತ್ತೆ. ಇನ್ನೇನು ತಾಳಿ ಕಟ್ಟ ಬೇಕು ಅನ್ನೋ ಅಷ್ಟರಲ್ಲಿ ಹಸೆಮಣೆಯಿಂದ ಎದ್ದಿರೋ ಸಂಗತಿಗಳು ಅಲ್ಲಲ್ಲಿ ಬೆಳಕಿಗೆ ಬರ್ತಾವೆ. ಈಗ ಅಂತಹದ್ದೇ ಪ್ರಕರಣ ದೇವನಹಳ್ಳಿಯಲ್ಲಿ ನಡೆದಿದೆ.
ಹೌದು, ರಾತ್ರಿ ರಿಸೆಪಕ್ಷನ್ ಮಾಡಿಕೊಂಡಿದ್ದ ಮಧುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಅಷ್ಟರಲ್ಲಿ ನನಗೆ ಮದುವೆ ಬೇಡ ಅಂತಾ ತಾಳಿ ಕಟ್ಟದೇ ಹಸೆಮಣೆಯಿಂದ ಎದ್ದು ಹೋಗಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬಾಲೇಪುರದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ. ವರನ ದಿಢೀರ್ ನಿರ್ಧಾರಕ್ಕೆ ಹುಡುಗಿ ಮನೆಯವರು ಕಕ್ಕಾಬಿಕ್ಕಿಯಾದ್ರೆ, ಮದುವೆ ಮಂಟಪದಲ್ಲಿದ್ದ ಸಂಬಂಧಿಕರು, ಸ್ನೇಹಿತರು ಶಾಕ್‌ಗೆ ಒಳಗಾಗಿದ್ದರು.
ದೇವನಹಳ್ಳಿಯ ಬಾಲೇಪುರ ಕಲ್ಯಾಣ ಮಂಟಪದಲ್ಲಿ ನಿನ್ನೆ ರಿಸೆಪಕ್ಷನ್ ನಡೆದಿದ್ದು, ಮಧುಮಗ ಬಾವಿ ಪತ್ನಿ ಜೊತೆ ಜೋಕ್ ಮಾಡಿಕೊಂಡು ಖುಷಿ ಖುಷಿಯಾಗೆ ಇದ್ದ. ಆದರೆ ಬೆಳಗ್ಗೆ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಅಷ್ಟರಲ್ಲಿ ಮದುವೆ ಹೆಣ್ಣಿನ ಮೇಲೆ ಅನುಮಾನ ಪಟ್ಟ ವರಮಹಾಶಯ, ನನಗೆ ಮದುವೆ ಬೇಡ ಅಂತಾ ಎದ್ದು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಮದುವೆ ಮನೆವರೆಗೂ ಸಂಬಂಧ ಬೆಳೆಸಿ ಒಂದೇ ಸಲ ಮದುವೆ ಬೇಡ ಅಂತಾ ಹೊರ ನಡೆದಿದ್ದು ಪೋಷಕರಿಗೆ ಬರಸಿಡಿಲೇ ಬಡಿದಂತಾಗಿತ್ತು. ಸಾಲ ಸೋಲ ಮಾಡಿ ಮಗಳ ಮದುವೆಯನ್ನು ಮಾಡುತ್ತಿದ್ದ ಪೋಷಕರಿಗೆ ದಿಕ್ಕೇ ತೋಚದಂತಾಗಿತ್ತು. ಮದುವೆ ನಿಂತಿದ್ದಕ್ಕೆ ವರ ಹಾಗೂ ವಧುವಿನ ಮನೆಕಡೆಯವರ ನಡುವೆ ಜಗಳ ಶುರುವಾಗಿತ್ತು., ಕೆಲ ಕಾಲ ಮದುವೆ ಮಂಟಪದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇನ್ನು ಈ ಬಗ್ಗೆ ಮದುವೆ ಗಂಡಿನಿಂದ ಅನ್ಯಾಯ ಆಗಿದೆ ಅಂತಾ ವಧುವಿನ ಕಡೆಯವರು ಆಕ್ರೋಶ ಹೊರಹಾಕಿ, ಚನ್ನರಾಯಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮದುವೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ಮದುಮಗಳು ಹಾಗೂ ಪೋಷಕರು ಮದುವೆ ನಿಂತಿದ್ದಕ್ಕೆ ಕಂಗಾಲಾಗಿದ್ಧಾರೆ. ವಧುವಿಗೆ ವರನಿಂದ ಅನ್ಯಾಯವಾಗಿದೆ ಎಂದು ವಧು ಕುಟುಂಬಸ್ಥರಿಂದ ಆಕ್ರೋಶ ಹೆಚ್ಚಾಗಿದೆ. ಸದ್ಯ ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೆ ಅದ್ಯಾವ ತಿರುವು ಪಡೆಯುತ್ತೋ ಕಾದುನೋಡಬೇಕಿದೆ.