ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಮದುವೆಗೆ ದಿನಾಂಕ ನಿಗದಿಯಾಗಿದೆ. ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ತೇಜಸ್ವಿ ಸೂರ್ಯ ಹಸೆಮಣೆ ಏರಲಿದ್ದಾರೆ.
ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ತೇಜಸ್ವಿ ಸೂರ್ಯ ಮಾರ್ಚ್ ಮೊದಲ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ಮಾರ್ಚ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಇವರ ವಿವಾಹ ಸಮಾರಂಭ ನೆರವೇರಲಿದೆ. ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ವೊಂದರಲ್ಲಿ ಇವರ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಮದುವೆ ಸಮಾರಂಭ ಮುಗಿದ ಬಳಿಕ ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ಕೂಡ ನಡೆಯಲಿದೆ.
ಶಿವಶ್ರೀ ಸ್ಕಂದ ಪ್ರಸಾದ್ ಅವರು ಚೆನ್ನೈ ಮೂಲದ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಬಿ.ಟೆಕ್ ಪದವೀಧರೆಯಾಗಿರುವ ಅವರು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ತಮ್ಮ ಗಾಯನದ ಮೂಲಕ ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. ಮದುವೆಗೂ ಮುನ್ನ ತೇಜಸ್ವಿ ಸೂರ್ಯ ಅವರು ಶಿವಶ್ರೀ ಅವರೊಂದಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದರು.
2021ರಲ್ಲಿ ಚೆನ್ನೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಅವರು ಶಿವಶ್ರೀ ಅವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನು ಶಿವಶ್ರೀ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇವರ ವಿವಾಹಕ್ಕೆ ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಕಂಕಣ ಭಾಗ್ಯ ಕೂಡಿ ಬಂದಿದೆ. ಇವರ ಮದುವೆಗೆ ರಾಜಕೀಯ ನಾಯಕರ ದಂಡು ಸೇರಲಿದೆ. ರಾಜ್ಯ ಹಾಗೂ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಕೂಡ ಭಾಗಿಯಾಗಲಿದ್ದಾರೆ.