ಗುಬ್ಬಿ :
ಗುಬ್ಬಿ ಪಟ್ಟಣದ ಪಿಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಗುಬ್ಬಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವು ಅಪರಾಧಗಳು ಮತ್ತು ಕಾನೂನು ನಿಯಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪಾಠ ಮಾಡಿದರು.
ಸಬ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರು ಮಾತನಾಡಿ ಹಿಂದಿನ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ಬಗ್ಗೆ ತಿಳಿದು ಪಾಲನೆ ಮಾಡಬೇಕು ಎಂದು ತಿಳಿಸಿದರು. ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆಗೆ ಮುಂದಾದಲ್ಲಿ ಪೋಷಕರ ಮೇಲೆ ಕೇಸ್ ದಾಖಲಿಸಿ 3 ತಿಂಗಳ ಜೈಲು ವಾಸದ ಜೊತೆಗೆ 25 ಸಾವಿರ ದಂಡ ವಿಧಿಸಲಾಗುತ್ತೇ ಎಂದು ತಿಳಿಸಿದರು. ಇನ್ನು ಬಾಲ್ಯವಿವಾಹ ಸೇರಿದಂತೆ ಬಾಲಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ ಬಗ್ಗೆ ತಿಳಿಸಿ, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ, ಒಂದು ವೇಳೆ ಬಳಸಿಕೊಂಡರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಆದ್ದರಿಂದ ಮಕ್ಕಳು ಇಂತಹ ವಿಚಾರ ತಿಳಿದು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು ಎಂದರು, ಅಲ್ಲದೇ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಬರ್ ಕ್ರೈಮ್ ಮತ್ತು ಡಿಜಿಟಲ್ ಅರೆಸ್ಟ್ ನಂತಹ ಅಪರಾಧಗಳ ಬಗ್ಗೆ ತಿಳಿದು ಪೊಲೀಸ್ ಸಹಾಯವಾಣಿಗೆ ಸಂಪರ್ಕ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.