ಚಾಮರಾಜನಗರ : ಚಾಮರಾಜನಗರದ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಇಂದು ಮುಂಜಾನೆ ಲಿಂಗೈಕ್ಯರಾಗಿದರು.
ಶ್ರೀ ಗುರುಸ್ವಾಮೀಜಿ ಅವರು ಹನೂರು ತಾಲೂಕಿನ ಜಿ.ಕೆ.ಹೊಸೂರು ಗಂಗಾಧರ ಕಟ್ಟೆ ಗ್ರಾಮದ ರುದ್ರಪ್ಪ ಮತ್ತು ಪುಟ್ಟ ಮಾದಮ್ಮರ ಜೇಷ್ಠ ಪುತ್ರರಾಗಿ, 1956ರ ಆಗಸ್ಟ್ 2ರಂದು ಜನಿಸಿದ್ದರು. ನಂತರ ಸಾಲೂರು ಬ್ರಹನ್ ಮಠಕ್ಕೆ 17ನೇ ಪೀಠಾಧ್ಯಕ್ಷರಾಗಿ 1995ರ ಜನವರಿ 29 ರಂದು ಅಧಿಕಾರ ವಹಿಸಿಕೊಂಡಿದ್ದರು.
ಶ್ರೀ ಪಟ್ಟದ ಗುರುಸ್ವಾಮೀಜಿ ತಮ್ಮ 12ನೇ ವಯಸ್ಸಿನಲ್ಲಿ ಶ್ರೀಮಠಕ್ಕೆ ಬಂದು ಕಾಯ, ವಾಚ, ಮನಸ ತ್ರಿಕರಣ ಶುದ್ದಿಯಿಂದ ಎಲೆಮರೆ ಕಾಯಿಯಂತೆ ದುಡಿದಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಶ್ರೀಮಠದಲ್ಲಿ ನಿತ್ಯ ದಾಸೋಹ ಸೇವೆ, ಶ್ರೀ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಶ್ರೀ ಮಠದ ಅಭಿವೃದ್ಧಿ, ಅರ್ಚಕರ ಜೀವನ ಉದ್ದಾರ ಜೊತೆಗೆ ಶ್ರೀ ಸಾಲೂರು ಸ್ವಾಮಿ ಟ್ರಸ್ಟ್ ವತಿಯಿಂದ ಪೂನ್ನಾಚಿ ಗ್ರಾಮದಲ್ಲಿ ಗಿರಿಜನ ದಿನದಲಿತರ ಹಿಂದುಳಿದವರ ಉಳಿವಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆ, 1999 ರಲ್ಲಿ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದಲ್ಲಿ ಪ್ರೌಢಶಾಲೆ, ಹನೂರು ಹೊರವಲಯದಲ್ಲಿ ವೃದ್ಧರಿಗೆ ಆಶ್ರಯ ನೀಡಲು 10 ಎಕರೆ ಪ್ರದೇಶದಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ ನೂರಾರು ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಸಂಸ್ಕೃತ ಪಾಠ ಶಾಲೆಗಳನ್ನು ತೆರೆದಿದ್ದಾರೆ. ಹಬ್ಬ ಮತ್ತು ಜಾತ್ರೆ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಇಲ್ಲಿ ದಾಸೋಹ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದರು.