ಶಿರಾ :
ಬೇಸಿಗೆ ತಾಪಮಾನ ಹೆಚ್ಚಾಗಿ ಶಿರಾದಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಸಂಭವಿಸುತ್ತುವೆ. ಅದರಲ್ಲೂ ನಿನ್ನೆ ಯುಗಾದಿ ಹಬ್ಬದ ದಿನವೇ ಶಿರಾ ತಾಲೂಕಿನ ವಿವಿಧೆಡೆ ಬೆಂಕಿ ಅನಾಹುತಗಳು ಜರುಗಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಗ್ನಿಶಾಮಕ ವಾಹನದ ಕೊರತೆಯಿಂದ ಬೆಂಕಿ ನಂದಿಸಲು ತೊಂದರೆ ಆಗ್ತಿದೆ. ಶಿರಾ ತಾಲೂಕಿನ ಅಗ್ನಿಶಾಮಕ ಕಚೇರಿಯಲ್ಲಿ ಎರಡು ಅಗ್ನಿಶಾಮಕ ವಾಹನಗಳು ಇವೆ. ಆದರೆ ಅದರಲ್ಲಿ ಒಂದು ಸುಮಾರು 15 ವರ್ಷ ಹಳೆಯದಾದ ಅಗ್ನಿಶಾಮಕ ವಾಹನವಾಗಿದ್ದು, ನೊಂದಣಿ ರದ್ದಾಗಿದೆ. ಹೀಗಾಗಿ ತಾಲೂಕಿನಲ್ಲಿ ಒಂದೇ ಒಂದು ಅಗ್ನಿಶಾಮಕ ವಾಹನವಿದ್ದು ಬೆಂಕಿ ದುರಂತ ಸಂಭವಿಸಿದರೆ, ಬೆಂಕಿ ನಂದಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ಇನ್ನು ನೊಂದಣಿ ರದ್ದಾಗಿರೋ ಅಗ್ನಿಶಾಮಕ ವಾಹನ ಶೆಡ್ ಸೇರಿದ್ದು, ಉಳಿದಿರುವ ಇನ್ನೊಂದು ವಾಹನದ ನೊಂದಣಿ ಮುಗಿಯಲು ಒಂದು ವರ್ಷ ಮಾತ್ರ ಬಾಕಿ ಇದೆ. ಹೀಗಿರುವಾಗ ಶಿರಾ ತಾಲೂಕಿನ ಸುತ್ತಮುತ್ತ ಬೆಂಕಿ ದುರಂತಗಳು ನಡೆದರೆ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ, ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಜರುಗುತ್ತಿದ್ದು, ಇರೋ ಒಂದು ಅಗ್ನಿಶಾಮಕ ವಾಹನದಲ್ಲೇ ಬೆಂಕಿ ನಂದಿಸಲು ಸಾಧ್ಯವಾಗ್ತಿಲ್ಲ. ತಾಲೂಕಿಗೆ ಇನ್ನೊಂದು ಅಗ್ನಿಶಾಮಕ ವಾಹನದ ಅವಶ್ಯಕತೆ ಇದ್ದು, ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ತಾಲೂಕಿಗೆ ಮತ್ತೊಂದು ಅಗ್ನಿಶಾಮಕ ವಾಹನವನ್ನು ಮಂಜೂರು ಮಾಡಿಕೊಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸ್ತಾ ಇದ್ದಾರೆ.