ಶಿರಾ:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳು ಬಡ ಜನರ ಜೊತೆ ಚೆಲ್ಲಾಟ ಆಡ್ತಾ ಇದ್ದು, ಫೈನಾನ್ಸ್ಗಳ ಕಿರುಕುಳದಿಂದ ಬೇಸತ್ತು ಅನೇಕರು ಸೂಸೈಡ್ ಮಾಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಶಿರಾದ ಶಾಸಕ ಟಿ.ಬಿ ಜಯಚಂದ್ರ ನೇತೃತ್ವದಲ್ಲಿ ಆಡಳಿತ ಸೌಧ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಡಿವೈಎಸ್ಪಿ, ಬಿ.ಕೆ ಶೇಖರ್ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಇ.ಓ. ಹರೀಶ್, ನಗರಸಭೆ ಆಯುಕ್ತ ರುದ್ರೇಶ್, ಸೇರಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಸುಧೀರ್ಘವಾಗಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳೊಂದಿಗೆ ಶಾಸಕ ಜಯಚಂದ್ರ ಮಾತುಕತೆ ನಡೆಸಿದ್ದು, ಫೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು. ಸಾಲ ನೀಡುವಾಗ ಮತ್ತು ಹಿಂಪಡೆಯುವಾಗ ಏನೆಲ್ಲಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸ ಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನಗಳನ್ನು ನೀಡಿದೆ. ಅವುಗಳನ್ನು ಹಣ ಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಟಿ.ಬಿ ಜಯಚಂದ್ರ ಸೂಚಿಸಿದರು. ಇನ್ನು ಸಾಲ ನೀಡುವಾಗ ಬಡ್ಡಿದರ, ಹಿಂಪಡೆಯುವ ಅವಧಿ, ಪ್ರೊಸೆಸಿಂಗ್ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕಗಳು ಏನೇ ಇದ್ದರೂ ಸಾಲ ಪಡೆಯುವವರಿಗೆ ಮುಂಚಿತವಾಗಿಯೇ ತಿಳಿಸಬೇಕು. ಯಾವುದೇ ಶುಲ್ಕಗಳನ್ನು ಮುಚ್ಚಿಡುವಂತಿಲ್ಲ ಎಂದು ಖಡಕ್ ಆಗಿ ಸೂಚನೆ ನೀಡಿದರು.