ಶಿರಾ:
ಕಲ್ಪತರು ನಾಡು ತುಮಕೂರು ಬೆಂಗಳೂರಿನ ಭಾಗವಾಗುವತ್ತ ದಾಪುಗಾಲಿಡ್ತಿದೆ. ತುಮಕೂರಿನ ವಸಂತನರಸಾಪುರ ಇಂಡಸ್ಟ್ರೀಯಲ್ ಏರಿಯಾ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇಲ್ಲಿ ಜಪಾನ್ ಮಷಿನ್ ಆಂಡ್ ಟೂಲ್ ಪಾರ್ಕ್ ನಿರ್ಮಾಣಗೊಂಡಿದೆ. ಮೆಗಾ ಫುಡ್ ಪಾರ್ಕ್ ಕೂಡ ತಲೆಯೆತ್ತಿದೆ. ಜೊತೆಗೆ ವಸಂತನರಸಾಪುರ ಪಕ್ಕದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ, ಇನ್ನು ನಮ್ಮ ದೇಶದ ಹೆಮ್ಮೆಯ ಸಂಸ್ಥೆಯಾದ ಎಚ್‌ಎಎಲ್ ನ ಯುದ್ಧ ಹೆಲಿಕಾಪ್ಟರ್ ಗಳ ನಿರ್ಮಾಣ ಘಟಕ ಕೂಡ ತುಮಕೂರಿನಲ್ಲೇ ಇದೆ. ಇಸ್ರೋ ಘಟಕ ಕೂಡ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇಷ್ಟೆಲ್ಲಾ ಇರೋ ತುಮಕೂರಿಗೆ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈಗ ಜಿಲ್ಲೆಯ ಹಿರಿಯ ರಾಜಕಾರಣಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಜ.ಜಯಚಂದ್ರ ಕೂಡ ಧ್ವನಿಗೂಡಿಸಿದ್ದಾರೆ.
ತುಮಕೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತೆ ಎಂಬ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ. ಆದರೆ ತುಮಕೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲ್ಲ. ಇದು ಬೆಂಗಳೂರು ಗ್ರಾಮಾಂತರ ಅಥವಾ ರಾಮನಗರ ಜಿಲ್ಲೆಗೆ ಶಿಫ್ಟ್ ಆಗುತ್ತೆ ಎಂದು ಸುದ್ದಿಯಾಗಿತ್ತು. ಆದರೀಗ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ತುಮಕೂರಿನಲ್ಲಿ ಎರಡು ಕಡೆ ಜಾಗ ಗುರುತಿಸಲಾಗಿದೆ ಅಂತಾ ಖುದ್ದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅವರೇ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾದರೆ ಶಿರಾ ತಾಲೂಕಿನಲ್ಲಿ ಜಮೀನು ನೀಡಲು ಸಿದ್ಧ ಅಂತಾ ಶಿರಾ ಶಾಸಕ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಬರೋಬ್ಬರಿ ೬೦೦೦ ಹೆಕ್ಟೇರ್ ಭೂಮಿ ನೀಡುವುದಾಗಿ ಟಿ.ಬಿ.ಜಯಚಂದ್ರ ಘೋಷಣೆ ಮಾಡಿದ್ದಾರೆ.
ಒಟ್ಟಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭಾರೀ ಜಟಾಪಟಿ ಶುರುವಾಗಿದೆ. ಒಂದು ಕಡೆ ತುಮಕೂರಿಗೆ ಏರ್‌ಪೋರ್ಟ್ ತರಲು ತುಮಕೂರಿನ ಸಚಿವರು, ರಾಜಕಾರಣಿಗಳು ಒತ್ತಡ ಹಾಕ್ತಿದ್ದರೆ, ಮತ್ತೊಂದು ಕಡೆ ಇದನ್ನು ರಾಮನಗರ ಜಿಲ್ಲೆಗೆ ಕೊಂಡೊಯ್ಯಲು ಡಿಸಿಎಂ ಡಿಕೆ ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಈ ವಿಚಾರವಾಗಿ ತುಮಕೂರು ಜಿಲ್ಲೆಯಲ್ಲಿಯೂ ಪೈಪೋಟಿ ಶುರುವಾದಂತಿದ್ದು, ತಮ್ಮ ಕ್ಷೇತ್ರದಲ್ಲೇ ಏರ್‌ಪೋರ್ಟ್ ನಿರ್ಮಾಣವಾಗಲಿ ಅಂತಾ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ.