ಶಿರಾ:
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಸಾಕ್ಷಿಹಳ್ಳಿ ಗ್ರಾಮದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ತುಂಬ ಗುಂಡಿಗಳದ್ದೇ ಕಾರುಬಾರು. ಇದು ಮಾತ್ರವಲ್ಲದೇ ರಸ್ತೆಯಲ್ಲಿ ಡಾಂಬರೆಲ್ಲಿದೆ ಎಂದು ಹುಡುಕಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಈ ಮಾರ್ಗವಾಗಿ ಸುಮಾರು 10ಕಿಲೋಮೀಟರ್ ದೂರದ ಸಾಕ್ಷಿಹಳ್ಳಿ ತಲುಪಬೇಕಾದರೆ ವಾಹನ ಹಳ್ಳಕ್ಕಿಳಿಸದೇ ಚಲಾಯಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಸಂಪೂರ್ಣ ಗುಂಡಿಗಳು ಕೂಡಿದ್ದರಿಂದ ಸದ್ಯ ಮಳೆ ಇಲ್ಲದಿರೋದ್ರಿಂದ ಸಂಫೂರ್ಣ ಧೂಳುಮಯವಾಗಿದೆ. ಧೂಳಿನಿಂದಾಗಿ ರಸ್ತೆ ಕಾಣಿಸದೇ ಅದೆಷ್ಟೋ ಅಪಘಾತಗಳು ಆಗುತ್ತಿದೆ. ಅಲ್ಲದೇ ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಹೋಗಿರೋ ಉದಾಹರಣೆಗಳು ಕೂಡ ಇದೆ. ಇನ್ನು ಮಳೆಗಾಲದಲ್ಲಿ ರಸ್ತೆ ಯಾವುದೋ, ಗುಂಡಿ ಯಾವುದೋ ಒಂದು ಗೊತ್ತಾಗದೇ ಈ ರಸ್ತೆಯಲ್ಲಿ ಬಿದ್ದು ಆಸ್ಪತ್ರೆ ಪಾಲಾಗುತ್ತಿರೋದು ಸಾಮಾನ್ಯವಾಗಿದೆ. ಇಲ್ಲಿನ ರಸ್ತೆಗಳ ಅಭಿವೃದ್ಧಿ ಹಿನ್ನಡೆಗೆ ರಾಜಕೀಯ ಕಾರಣ ಎಂಬುವುದು ತೆರೆಮರೆಯಲ್ಲಿ ಪ್ರಚಲಿತದಲ್ಲಿರುವ ಸಂಗತಿಯಾಗಿದೆ.
ಬುಕ್ಕಾಪಟ್ಟಣ ಹೋಬಳಿ ಶಿರಾ ತಾಲ್ಲೂಕಿಗೆ ಸೇರಿದ್ದರೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಆದ್ದರಿಂದ ಎರಡು ಕ್ಷೇತ್ರದ ಶಾಸಕರು ಈ ಹೋಬಳಿಯನ್ನು ಮೂಲೆಗುಂಪು ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ರಸ್ತೆ ಕಿರಿದಾಗಿದ್ದು, ಗುಂಡಿಗಳಿಂದ ಕೂಡಿದೆ ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಶಾಸಕರು ಈ ಬಗ್ಗೆ ನಿಗಾವಹಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.