ಶಿರಾ : ತಿಂಗಳುಗಳೇ ಕಳೆದ್ರೂ ಕಾರ್ಮಿಕರಿಗೆ ಬಾರದ ಪಿಂಚಣಿ

ಶಿರಾ:

ಅಸಂಘಟಿತ ವಲಯದ ಕಾರ್ಮಿಕರು ಸ್ವಾಭಿಮಾನಿ ಜೀವನ ನಡೆಸಬೇಕು, ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್‌ ಧನ್‌ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನು ಈ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರದಂತೆ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಕಳೆದ ಆರೇಳು ತಿಂಗಳುಗಳಿಂದ ಈ ಯೋಜನೆಯ ಹಣವೇ ಬರ್ತಿಲ್ಲ. ಹೀಗಾಗಿ ಕಾರ್ಮಿಕರು ಕಂಗಾಲಾಗಿದ್ದಾರೆ.

ಶಿರಾ ನಗರದ ಹಲವು ಕಾರ್ಮಿಕರು ಈ ಯೋಜನೆಯಡಿ ಪಿಂಚಣಿಯನ್ನು ಪಡೆಯುತ್ತಿದ್ದರು. ಆದರೆ ಕಳೆದ ನಾಲ್ಕೈದು ತಿಂಗಳಿಂದ ಇವರಿಗೆ ಪಿಂಚಣಿಯ ಹಣವೇ ಪಾವತಿಯಾಗ್ತಿಲ್ಲವಂತೆ. ತಿಂಗಳಿಗೆ ಮೂರು ಸಾವಿರ ರೂಪಾಯಿ ಬರ್ತಿದ್ದರಿಂದ ಇದನ್ನೇ ನಂಬಿ ಹೇಗೋ ಜೀವನ ಸಾಗಿಸುತ್ತಿದ್ದ ಬಡಕಾರ್ಮಿಕರು ಇದೀಗ ಹಣ ಬಾರದೇ ತೊಂದರೆ ಅನುಭವಿಸುವಂತಾಗಿದ್ದು, ಪ್ರಜಾಶಕ್ತಿ ತಂಡದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬಡತನದಿಂದ ಬಳಲುತ್ತಿರುವ ಕಾರ್ಮಿಕರು, ತಮ್ಮ ಸಣ್ಣಪುಟ್ಟ ಖರ್ಚುಗಳಿಗೆ, ಔಷಧಿಗಳ ಖರ್ಚಿಗೆ ಇದೇ ಹಣವನ್ನು ನಂಬಿಕೊಂಡಿದ್ದರು. ಆದರೆ ಇದೀಗ ಈ ಪಿಂಚಣಿ ಹಣ ಬರುವುದೇ ನಿಂತುಹೋಗಿದೆ. ಇನ್ನು ಯುಗಾದಿ ಹಬ್ಬಕ್ಕೆ ಒಂದೇ ಸಲ ಹಣ ಬರಬಹುದೆಂಬ ನಿರೀಕ್ಷೆಯಲ್ಲಿ ಈ ಕಾರ್ಮಿಕರಿದ್ದರು. ಆದರೆ ಯುಗಾದಿ ಕಳೆದರೂ ಹಣ ಬಾರದೇ ಇರೋದರಿಂದ ನಿರಾಶರಾಗಿದ್ದಾರೆ. ಅಲ್ಲದೇ ಈ ಯೋಜನೆ ಬಗ್ಗೆ ಕೆಲ ಜನರಿಗೆ ಮಾಹಿತಿಯೂ ಇಲ್ಲ, ಹಣವೂ ಬರ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಅಂತಾ ಕಾರ್ಮಿಕರು ಆರೋಪಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪಿಂಚಣಿ ಹಣವನ್ನೇ ನಂಬಿ ಬದುಕುತ್ತಿರುವ ಬಡ ಕಾರ್ಮಿಕರ ಸಮಸ್ಯೆಗೆ ಮುಕ್ತಿ ದೊರಕಿಸಿ ಕೊಡಬೇಕಿದೆ.

Author:

share
No Reviews