ಶಿರಾ : ಶಾಸಕ ಜಯಚಂದ್ರ ಅವರೇ ಎಲ್ಲಿದ್ದೀರಿ…? ನಿಮ್ಮ ಕ್ಷೇತ್ರದ ಹಳ್ಳಿಗಳ ಸ್ಥಿತಿಯನ್ನ ಒಮ್ಮೆ ನೋಡಿ

ಕಲ್ಲಶೆಟ್ಟಿಹಳ್ಳಿ ಗ್ರಾಮ
ಕಲ್ಲಶೆಟ್ಟಿಹಳ್ಳಿ ಗ್ರಾಮ
ತುಮಕೂರು

ಶಿರಾ:

ತುಮಕೂರು ಜಿಲ್ಲೆಯ ಶಿರಾ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗ್ತಿದೆ. ಆದರೆ ಶಿರಾ ತಾಲೂಕಿನ ಹಳ್ಳಿಗಳ ಸ್ಥಿತಿ ಮಾತ್ರ ಹೇಳತೀರದಾಗಿದೆ. ಯಾಕೆಂದರೆ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳೇ ಮರಿಚೀಕೆಯಾಗಿದ್ದು, ಈ ಬಗ್ಗೆ ಪ್ರಜಾಶಕ್ತಿಯ ನಮ್ಮ ನಡೆ ನಿಮ್ಮೂರ ಕಡೆ ಅಭಿಯಾನದಲ್ಲಿ ಬಯಲಾಗಿದೆ. ಶಿರಾ ತಾಲೂಕಿನ ಹಳ್ಳಿಗಳಲ್ಲಿ ಜ್ವಲಂತ ಸಮಸ್ಯೆಗಳು ಎದ್ದು ಕಾಣುತ್ತಿದ್ದು ಜನರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಶಕ್ತಿ ಟಿವಿಯು ಈ ವಾರ ಶಿರಾ ತಾಲೂಕಿನಲ್ಲಿ ಸಂಚಾರ ಮಾಡಿದ್ದು, ಸೀಬಿ ಗ್ರಾಮ ಪಂಚಾಯ್ತಿಗೆ ಸೇರಿದ ಕಲ್ಲಶೆಟ್ಟಿಹಳ್ಳಿ ಗ್ರಾಮದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ. ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳೇ ಇಲ್ಲವಾಗಿದೆ, ಇಲ್ಲಿನ ಜನರ ಗೋಳು ಹೇಳತೀರದಾಗಿದೆ. ಈ ಗ್ರಾಮದಲ್ಲಿ ಒಂದ್ಕಡೆ ಚರಂಡಿ ವ್ಯವಸ್ಥೆ ಇಲ್ಲ, ಇದ್ದರೂ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ ಕಾರಣ, ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು ನೀರು ಹರಿಯದೇ ಇರೋದರಿಂದ ಸೊಳ್ಳೆಗಳ ಕಾಟ ಶುರುವಾಗಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದಭೀತಿ ಶುರುವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾರೊಬ್ಬರು ಕಿವಿಗೆ ಹಾಕಿಕೊಳ್ತಾ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನು ಕಲ್ಲಶೆಟ್ಟಿಹಳ್ಳಿ ಗ್ರಾಮದ ಜನರು ಈವರೆಗೂ ಬಸ್‌ಗಳನ್ನು ನೋಡಿಲ್ಲವಂತೆ, ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಊರಿನ ಜನರು ಸುಮಾರು ಐದರಿಂದ ಆರು ಕಿಲೋ ಮೀಟರ್‌ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇದಲ್ಲದೇ ರೋಗಿಗಳು ಆಸ್ಪತ್ರೆಗೆ ಹೋಗಬೇಕೆಂದರೆ ಸಾಕಷ್ಟು ಸಮಸ್ಯೆ ಆಗ್ತಿದ್ದು ಅಧಿಕಾರಿಗಳು ಹಾಗೂ ಶಾಸಕರು ಮಾತ್ರ ನಿದ್ದೆಗೆ ಜಾರಿದ್ದಾರೆ. ಹಾಗೂ ಈ ಗ್ರಾಮದಲ್ಲಿ ನೀರಿನ ಅಭಾವ ಕೂಡ ತಾಂಡವ ಆಡ್ತಿದೆ. ಕೇಂದ್ರ ಸರ್ಕಾರದ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿ ಅಡಿಯಲ್ಲಿ ಮನೆ ಮನೆಗೆ ನಲ್ಲಿಗಳನ್ನು ಹಾಕಲು ಕಾಮಗಾರಿ ನಡೆಸಲಾಗಿದೆ, ಆದರೆ ಪೈಪ್‌ಗಳನ್ನು ಹಾಕಿ ಗುಂಡಿ ಮುಚ್ಚಿ ಹೋದ ಅಧಿಕಾರಿಗಳು ಇತ್ತ ಸುಳಿದಿಲ್ಲ, ಹೀಗಾಗಿ ಇಲ್ಲಿನ ಜನರ ಆಕ್ರೋಶ ತೀವ್ರವಾಗಿದೆ.

ಶಾಸಕರಾದ ಟಿ.ಬಿ ಜಯಚಂದ್ರ ಅಭಿವೃದ್ಧಿ ಕೆಲಸ ಮಾಡ್ತಾ ಇದ್ದೀವಿ ಆಂತಾರೆ, ಆದರೆ ಅವರ ಕ್ಷೇತ್ರದ ಗ್ರಾಮದ ಸ್ಥಿತಿಗಳು ಮಾತ್ರ ಬೆಚ್ಚಿ ಬೀಳಿಸುವಂತಾಗಿದೆ. ಇನ್ನಾದರೂ ಶಾಸಕರು, ಅಧಿಕಾರಿಗಳು ಎಚ್ಚೆತ್ತುಕೊಂಡು ಕಲ್ಲಶೆಟ್ಟಿಹಳ್ಳಿ ಗ್ರಾಮದ ಜನರಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವ ಕೆಲಸ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews