ಶಿರಾ :
ತುಮಕೂರು ಶಿರಾ ತಾಲೂಕಿನ ಬುಕ್ಕಾಪಟ್ಟಣ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆ ಯಾಡುತ್ತಿದ್ದ ೧೮ ಮಂದಿ ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಕಾಡಿನಂಚಿನಲ್ಲಿ ಈ ಬೇಟೆಗಾರರು ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ೧೮ ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ತಂದಿದ್ದ ಹೈ ಫ್ಲಾಶ್ ಲೈಟ್‍ಗಳು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಟಾಟಾಏಸ್ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇನ್ನು 18 ಮಂದಿ ಆರೋಪಿಗಳು ಮಧುಗಿರಿ ತಾಲೂಕಿನ ಬಡವನಹಳ್ಳಿ ಸುತ್ತಮುತ್ತಲಿನ ಮೂಲದವರಾಗಿದ್ದು, ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪರಿಪಾಲಕರು ಕಾರ್ಯ ಪ್ರವೃತ್ತರಾಗಿ, ಇಡೀ ಅರಣ್ಯ ಪ್ರದೇಶವನ್ನು ವೀಕ್ಷಣೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ.ಬಳಿಕ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಲಿದ್ದಾರೆ.