ಶಿಮ್ಲಾ (ಹಿಮಾಚಲ ಪ್ರದೇಶ): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆ, ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು (IGMC) ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ವಿಶ್ರಾಂತಿಗಾಗಿ ಶಿಮ್ಲಾಕ್ಕೆ ಬಂದಿದ್ದ ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಎಂಆರ್ಐ ಸೇರಿದಂತೆ ಹಲವು ಪರೀಕ್ಷೆಗಳು ನಡೆಯುತ್ತಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ವೈದ್ಯರು ಸಂಪೂರ್ಣ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ.
78 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವು ಬಾರಿ ಅನಾರೋಗ್ಯಗೊಂಡು, ಆಸ್ಪತ್ರೆ ಸೇರಿದ್ದರು. ಸೋನಿಯಾ ಗಾಂಧಿ ದೀರ್ಘಕಾಲದವರೆಗೆ ಉಸಿರಾಟದ ತೊಂದರೆಗಳು ಮತ್ತು ಕೋವಿಡ್ ನಂತರದ ತೊಂದರೆಗಳಿಂದ ಬಳಲುತ್ತಿದ್ದರು. ಇನ್ನು ಕಳೆದ ಸೋಮವಾರ ತಾನೇ ಶಿಮ್ಲಾಗೆ ಆಗಮಿಸಿದ್ದ ಸೋನಿಯಾ ಗಾಂಧಿ ಅವರು ತಮ್ಮ ಪುತ್ರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಛರಾಬ್ರಾದಲ್ಲಿರುವ ಮನೆಯಲ್ಲಿ ತಂಗಿದ್ದರು. ಆದರೆ ಈ ಸಂದರ್ಭದಲ್ಲೇ ಅವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗ್ತಿದೆ.