ತಿಪಟೂರು : ತಿಪಟೂರು ಅಂದ್ರೆ ಶೈಕ್ಷಣಿಕವಾಗಿ ಬೆಳೆಯುತ್ತಿರುವ ತಾಲೂಕು ಅಂತಾಲೇ ಹೆಸರುವಾಸಿ. ಇಲ್ಲಿ ತಲೆಎತ್ತಿರುವ ಶೈಕ್ಷಣಿಕ ಸಂಸ್ಥೆಗಳಿಂದಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿದೆ. ಇಡೀ ರಾಜ್ಯಕ್ಕ ತೆಂಗನ್ನು ಸರಬರಾಜು ಮಾಡುವ ತಾಲೂಕಿನಲ್ಲಿ ತಿಪಟೂರು ಮುಖ್ಯಪಾತ್ರವಹಿಸುತ್ತದೆ. ಇಂತಹ ನಗರವನ್ನು ಜಿಲ್ಲೆಯನ್ನಾಗಿ ಮಾಡಿ ಅನ್ನೋ ಕೂಗು ಕೂಡ ಕೇಳಿಬರ್ತಿದೆ. ಆದ್ರೆ ಇದೆಲ್ಲದರ ನಡುವೆ ಇಲ್ಲಿ ಅವ್ಯವಸ್ಥೆಯು ಕೂಡ ತಾಂಡವವಾಡುತ್ತಿದೆ. ನಗರಸಭೆಯ ನಿರ್ಲಕ್ಷ್ಯದಿಂದ ವಾಹನ ಸವಾರರು ಜೀವಭಯದಲ್ಲಿಯೇ ಸಂಚರಿಸುವಂತಾಗಿದೆ.
ಕಲ್ಪತರು ತಾಲೂಕಿನಲ್ಲಿ ಮೊನ್ನೆ ತಾನೇ ಜನರು ನಗರಸಭೆಯು ವಾರ್ಡ್ ಗಳು, ಮುಖ್ಯರಸ್ತೆ, ಹಾಗೂ ಅಡ್ಡ ರೆಸ್ತೆಯಲ್ಲಿ ನಾಮಫಲಕಗಳಿಲ್ಲ. ನಾವು ವಿಳಾಸ ಹುಡುಕೋದು ಕಷ್ಟವಾಗ್ತಿದೆ ಅಂತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಈಗ ಒಳಚರಂಡಿಯೊಂದು ಸಾವಿಗೆ ಬಾಯ್ತೆರೆದು ಕೂತಿದೆ. ನಗರಸಭೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ರೋಸಿ ಹೋಗಿದ್ದಾರೆ. ಎಷ್ಟೇ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಕ್ಯಾರೆ ಅನ್ನುತ್ತಿಲ್ಲವಂತೆ.
ಹಾಸನ ಸರ್ಕಲ್ ನಲ್ಲಿ ಒಳಚರಂಡಿ ವ್ಯವಸ್ಥೆ ದುಸ್ಥಿತಿಯಲ್ಲಿದೆ. ಈ ಸರ್ಕಲ್ನಲ್ಲಿಯೇ ಅತೀ ಹೆಚ್ಚು ಜನರು ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಇಂತಹ ರಸ್ತೆಯಲ್ಲಿರುವ ಈ ಚರಂಡಿಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ನಡೆದುಕೊಂಡು ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಸರ್ಕಲ್ ನ ಮುಖ್ಯ ದ್ವಾರದಲ್ಲಿ ಸಿದ್ದಗಂಗಾ ಬೇಕರಿ ಹಾಗೂ ಕಲ್ಪತರು ಇಂಜಿನಿಯರ್ ಕಾಲೇಜ್ ಕೂಡ ಇವೆ. ಇಲ್ಲಿ ಓಡಾಡುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು. ಇನ್ನು ಈ ಸರ್ಕಲ್ 4 ರಸ್ತೆಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಇಂತಹ ಸರ್ಕಲ್ನಲ್ಲಿರುವ ಚರಂಡಿ ಮಾತ್ರ ಗಬ್ಬೆದ್ದು ನಾರುತ್ತಿದೆ.
ಇನ್ನು ಗ್ರಾಂಡ್ ಹೋಟೆಲ್ ಮುಂಭಾಗದಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಒಳ ಚರಂಡಿ ಇದ್ದರೂ ಸಹ ರಸ್ತೆಯಲ್ಲೆ ಮಳೆ ನೀರು ನಿಲ್ಲುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಸಾರ್ವಜನಿಕರು ಈ ಕೊಳಚೆ ನೀರಿನ ಮೇಲೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರ ಸಮಸ್ಯೆಗೆ ಬಗೆಹರಿಸಬೇಕಿದೆ.