ಕೊರಟಗೆರೆ:
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌರಿಕಲ್ಲು ಗ್ರಾಮದಲ್ಲಿ ಮತ್ತೆ ಕಲ್ಲು ಗಣಿಗಾರಿಕೆಯ ಸದ್ದು ಜೋರಾಗಿದೆ. ಗೌರಿ ಕಲ್ಲು ಗ್ರಾಮಸ್ಥರ ಮತ್ತು ಕಾರ್ಮಿಕರ ವಿರೋಧದಿಂದ ಸುಮಾರು 15 ವರ್ಷದಿಂದ ಸ್ಥಗಿತವಾಗಿದ್ದ ಕಲ್ಲುಗಣಿಗಾರಿಕೆಗೆ ತುಮಕೂರು ಜಿಲ್ಲಾ ಕಲ್ಲು ಮತ್ತು ಭೂ ವಿಜ್ಞಾನ ಇಲಾಖೆ ಪರ್ಮಿಷನ್ ನೀಡಿದೆ ಎಂದು ಆರೋಪಿಸಿ ಬೆಂಡೋಣಿ ಜಯರಾಂ ವಿರುದ್ಧ ಬಂಡೆ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದು, ಮತ್ತೆ ಸಂಘರ್ಷಕ್ಕೆ ಕಾರಣವಾಗಿದೆ.
ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ ಬೆಂಡೋಣಿಯ ಜಯರಾಮ್ ಎಂಬಾತನಿಗೆ 15 ವರ್ಷದ ಹಿಂದೆ ಗಣಿಗಾರಿಕೆ ಇಲಾಖೆಯಿಂದ ಸರ್ವೇ ನಂಬರ್ 36ರಲ್ಲಿ 4 ಎಕರೆ ಸರ್ಕಾರಿ ಹಾಗೂ ಸರ್ಕಾರಿ ಗಣಿ ಇಲಾಖೆಯಿಂದ 4 ಎಕರೆ ಕಲ್ಲು ಕ್ವಾರೆ ಮಂಜೂರು ಆಗಿತ್ತು. ಅಂದಿನಿಂದ ಬಂಡೆ ಕಾರ್ಮಿಕರು ಹೋರಾಟ ಮಾಡ್ತಾ ಇದ್ದರು.
ಗೌರಿಕಲ್ಲಿನ ಕಲ್ಲುಕ್ವಾರೆಯ ಬಂಡೆಯಲ್ಲಿ ಬಂಡೇ ಕಾರ್ಮಿಕರು ಕಳೆದ 40 ವರ್ಷದಿಂದ ಬಂಡೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಆ ಕ್ವಾರೆಯನ್ನು ಸರ್ಕಾರ ಬೆಂಡೋಣಿ ಜಯರಾಮ್ಗೆ ಯಾವಾಗ ನೀಡಿತೋ ಅಂದಿನಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿತ್ತು. ಹೀಗಾಗಿ ಸಂಘರ್ಷ ಏರ್ಪಟ್ಟಿದ್ದರಿಂದ ಕಲ್ಲು ಕ್ವಾರೆಯಲ್ಲಿ ಗಣಿಗಾರಿಕೆಯನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೆ ಸಮಸ್ಯೆ ನಡುವೆಯೂ ಗಣಿಗಾರಿಕೆಗೆ ಇಲಾಖೆ ಪರ್ಮಿಷನ್ ಕೊಟ್ಟಿರೋದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನು ಕಾರ್ಮಿಕರ ವಿರೋಧದ ನಡುವೆಯು ಸಹ ಬೆಂಡೋಣಿ ಜಯರಾಮ್ ಬೆಂಬಲಿಗರು ಪರವಾನಗಿಯೇ ಇಲ್ಲದ ಟ್ರಾಕ್ಟರ್ನಿಂದ ಕಲ್ಲುಕ್ವಾರೆಯಲ್ಲಿ ರಂಧ್ರಕೊರೆದು ಬ್ಲಾಸ್ಟಿಂಗ್ ನಡೆಸಲು ಪೂರ್ವತಯಾರಿ ನಡೆಸುತ್ತಿದ್ದಾರೆ. ಬ್ಲಾಸ್ಟಿಂಗ್ ಪರವಾನಗಿ ಕೂಡ ಇಲ್ಲ, ಜೊತೆಗೆ ಟ್ರಾಕ್ಟರ್ನ ನಂಬರಿನ ಜೊತೆ ದಾಖಲೆಯೇ ಇಲ್ಲ. ಜಯರಾಂ ಬೆಂಬಲಿಗರನ್ನು ಕಾರ್ಮಿಕರು ಪ್ರಶ್ನಿಸಿದರೆ ಕಲ್ಲುಬಂಡೆಯ ಜೊತೆ ನೀವು ಬ್ಲಾಸ್ಟ್ ಆಗ್ತೀರಾ ಎಂಬ ದೌರ್ಜನ್ಯದ ಮಾತುಗಳು ಕೇಳಿಬಂದಿವೆ.
ಇನ್ನು ಕಲ್ಲುಬಂಡೆಯನ್ನೇ ನಂಬಿರುವ ಗೌರಿಕಲ್ಲು, ಮಲ್ಲೇಕಾವು ಮತ್ತು ಗೊಂದಿಹಳ್ಳಿಯ ಬಂಡೇ ಕಾರ್ಮಿಕರು ಕಲ್ಲು ಗಣಿಗಾರಿಕೆಯಿಂದ ಬೀದಿಗೆ ಬಿದ್ದಿದ್ದಾರೆ. ಗಣಿಗಾರಿಕೆಗೆ ಬೇರೆಯವರಿಗೆ ಪರ್ಮಿಷನ್ ಕೊಟ್ಟಿರೋದರಿಂದ ಬಂಡೆ ಕಾರ್ಮಿಕರ ಬದುಕು ಸಂಕಷ್ಟದಲ್ಲಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಂಡೆ ಕಾರ್ಮಿಕರ ಬದುಕನ್ನು ರಕ್ಷಿಸಬೇಕಿದೆ.