ಮೈಸೂರು :
ಇತ್ತೀಚೆಗೆ ಮೈಸೂರಿನ ವರುಣ ಗ್ರಾಮದ ಹೊರವಲಯದಲ್ಲಿ ಕ್ಯಾತಮಾರನಹಳ್ಳಿ ಮೂಲದ ರೌಡಿಶೀಟರ್ ಕಾರ್ತಿಕ್ ಬರ್ಬರವಾಗಿ ಕೊಲೆಯಾದ ಘಟನೆ ಭಾರೀ ಸಂಚಲನ ಮೂಡಿಸಿತ್ತು.ಪೊಲೀಸರು ಕೇವಲ 10 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಕರಣ ಬಗೆಹರಿಸಿದರೂ, ಇದೀಗ ಮೈಸೂರಿನಲ್ಲಿ ಮತ್ತೆ ರಕ್ತಪಾತದ ಭೀತಿಯು ಮನೆಮಾಡುತ್ತಿದೆ.
ಹೌದು, ಕಾರ್ತಿಕ್ ಕೊಲೆಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂಬ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ. ಜಗದೀಶ್ ಎಂಬ ಸೋಶಿಯಲ್ ಮೀಡಿಯಾ ಹೆಸರಿನ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿದ್ದು, ‘ಕಾರ್ತಿಕ್ ಕೊಲೆ ಆರೋಪಿಗಳನ್ನು ಹೊಡೆದೇ ಹೊಡೆಯುತ್ತೇವೆ. ನಿಮಗೂ ಬಂತು ಕೇಡುಗಾಲ’ ಎಂದು ಪೋಸ್ಟ್ ವೈರಲ್ ಮಾಡಲಾಗಿದೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ವರುಣ ಪೊಲೀಸ್ ಠಾಣೆಯಲ್ಲಿ ಜಗದೀಶ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.