RAJESH : ಖ್ಯಾತ ಬಹುಭಾಷಾ ನಟ ರಾಜೇಶ್ ಹೃದಯಾಘಾತದಿಂದ ನಿಧನ

ACTOR RAJESH : ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವಾರು ದಕ್ಷಿಣ ಭಾರತೀಯ ಭಾಷಾ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಚಿರಸ್ಥಾಯಿಯಾಗಿ ನೆನಪಾಗಿ ಉಳಿದಿರುವ ಖ್ಯಾತ ನಟ ರಾಜೇಶ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಇನ್ನು ವರದಿಗಳ ಪ್ರಕಾರ, ರಾಜೇಶ್ ಅವರು ಇತ್ತೀಚಿನ ದಿನಗಳಲ್ಲಿ ಕಡಿಮೆ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಆಸ್ಪತ್ರೆಯತ್ತ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.

ಅವರ ಮೃತದೇಹವನ್ನು ಚೆನ್ನೈನ ರಾಮಪುರಂನಲ್ಲಿರುವ ನಿವಾಸಕ್ಕೆ ತರಲಾಗಿದ್ದು, ಅವರ ಮಗಳು ಅಮೆರಿಕದಿಂದ ಹಿಂದಿರುಗಿದ ನಂತರ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.

ರಾಜೇಶ್ ಅವರ ನಿಧನದ ಕುರಿತು ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಶೋಕ ವ್ಯಕ್ತಪಡಿಸಿ, “ನನ್ನ ಆಪ್ತ ಸ್ನೇಹಿತ ರಾಜೇಶ್ ಅವರ ಅಗಲಿಕೆ ನಾನು ನಂಬಲಾಗದ ವಿಷಯ. ಒಬ್ಬ ಉತ್ತಮ ಕಲಾವಿದ ಮತ್ತು ವಿನಯಶೀಲ ವ್ಯಕ್ತಿತ್ವ ಇನ್ನು ನಮ್ಮ ನಡುವೆ ಇಲ್ಲ ಎಂಬುದು ದುಃಖದ ವಿಷಯ” ಎಂದು ಬರೆದಿದ್ದಾರೆ.

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ರಾಜೇಶ್, ವಿವಿಧ ಭಾಷೆಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಅವರ ನಿಧನದಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶೋಕದ ಛಾಯೆ ಕಂಡುಬಂದಿದೆ. ಅನೇಕ ಕಲಾವಿದರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews