ಬೆಳಗಾವಿ:
ದೇಶದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳಾಗಿವೆ. ಇದನ್ನು ಗಮನಿಸಿದರೆ ಬಿಜೆಪಿ ಮತ್ತು ಉಗ್ರರ ನಡುವೆ ಬಿಟ್ಟಿರಲಾರದ ಸಂಬಂಧ ಇದ್ದಂತಿದೆ ಎಂದು ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಇದ್ದಾಗಲೇ ದೇಶದಲ್ಲಿ ಇಂತಹ ಅಹಿಕರ ಘಟನೆಗಳು ನಡೆಯುತ್ತವೆ. ಒಂದರ ಮೇಲೊಂದು ದಾಳಿಗಳು ಕೂಡ ನಡೆಯುತ್ತಿವೆ. ಈ ಸರ್ಕಾರ ಅಷ್ಟು ದುರ್ಬಲವಾದ ಸರ್ಕಾರವಾಗಿದೆ. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಈ ಹಿಂದೆ ದೇಶದ ಸಂಸತ್ ಮೇಲೂ ದಾಳಿ , ಪಠಾಣ್‌ಕೋಟ್ ಏರ್‌ಬೇಸ್ ಮೇಲೆ ಉಗ್ರರ ದಾಳಿ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ರು. ಉರಿ ಆರ್ಮಿ ಬೇಸ್ ಮೇಲೆಯೂ ಉಗ್ರರ ದಾಳಿ ನಡೆಯಿತು. ಪುಲ್ವಾಮಾದಲ್ಲಿ ನಮ್ಮ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದರು. ಹೀಗೆ ಹತ್ತು ಹಲವು ವಿಚಾರಗಳು ನಮಗೆ ಸಿಗುತ್ತಿವೆ.
ದೇಶದಲ್ಲಿ ಬಿಜೆಪಿ ಸರ್ಕಾರವಿರುವಾಗಲೇ ಏಕೆ ಈ ರೀತಿಯ ದಾಳಿಗಳು ನಡೆಯುತ್ತಿವೆ. ಅಮರನಾಥ ಯಾತ್ರಾರ್ಥಿಗಳ ಹತ್ಯೆ ಹಾಗೂ ಈಗ ಪಹಲ್ಗಾಮ್‌ನಲ್ಲಿನ ದಾಳಿ ಮಾಡಲಾಗಿದೆ. ಇದಕ್ಕೆ ಕಾರಣ ಏನು ಮೋದಿಯವರೇ? ಉಗ್ರರನ್ನು ಮಟ್ಟ ಹಾಕಲು ಸರಕಾರದ ಪ್ರತಿಯೊಂದು ಕಾರ್ಯಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಗುಪ್ತಚರ ಹಾಗೂ ಭದ್ರತಾ ವೈಫಲ್ಯ ಕಾರಣವಾಗಿದೆ. ಅಲ್ಲಿ ಪೊಲೀಸ್ ಸುರಕ್ಷತೆ ಏಕೆ ಇರಲಿಲ್ಲ? ಪಹಲ್ಗಾಮ್‌ನಲ್ಲಿ ಮೂರು ಹಂತದ ಭದ್ರತೆ ಇದ್ದರೂ ದಾಳಿ ಆದ ಜಾಗದಲ್ಲಿ ಪೊಲೀಸರು ಏಕೆ ಇರಲಿಲ್ಲ? ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ಹೇಗೆ ಆಯಿತು? ಇದಲ್ಲದಕ್ಕು ಒಂದೇ ಉತ್ತರ ಅದುವೇ ಬಿಜೆಪಿ ಭದ್ರತಾ ವೈಫಲ್ಯ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.