INDIAN PREMIER LEAGUE 2025 : ಐಪಿಎಲ್ 2025 ಸೆಮಿಫೈನಲ್ ತೀವ್ರತೆಯ ತಿರುವು ಪಡೆದುಕೊಳ್ಳುತ್ತಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ರಾತ್ರಿ 7:30ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಜೂನ್ 3ರಂದು ನಡೆಯುವ ಐಪಿಎಲ್ ಫೈನಲ್ನಲ್ಲಿ RCB ವಿರುದ್ಧ ಪ್ರಶಸ್ತಿ ಕಾದಾಟ ನಡೆಸಲಿದೆ. ಹೀಗಾಗಿ ಇವತ್ತು ನಡೆಯುವ ಪಂದ್ಯ ಕೇವಲ ಕ್ವಾಲಿಫೈಯರ್ ಅಲ್ಲ – ಇದು "ಫೈನಲ್ ಟಿಕೆಟ್" ಗೆ ಪೈಪೋಟಿ. ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು 33 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 17 ಗೆಲುವು ಸಾಧಿಸಿದ್ದು ಪಂಜಾಬ್ 16 ಗೆಲುವನ್ನು ಕಂಡಿದೆ. ಅಂತೆಯೇ ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ತೀವ್ರವಾಗಿದೆ.
ಪಂಜಾಬ್ ಕಿಂಗ್ಸ್, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ 11 ವರ್ಷಗಳ ಬಳಿಕ ಪ್ಲೇ ಆಫ್ಗೆ ಪ್ರವೇಶಿಸಿದೆ. ಬಲಿಷ್ಠ ಆಟಗಾರರ ಬಳಗದೊಂದಿಗೆ ಈ ಬಾರಿ ಪ್ರಶಸ್ತಿಗೆ ಮುತ್ತಿಡುವ ದೃಢ ನಂಬಿಕೆಯಲ್ಲಿದೆ. ಇತ್ತ, ಮುಂಬೈ ಇಂಡಿಯನ್ಸ್, ಆರಂಭಿಕ ಐದು ಸೋಲಿನ ನಂತರ ಶಕ್ತಿಶಾಲಿ ರೀತಿ ಕಮ್ಬ್ಯಾಕ್ ನೀಡಿ, ಎಲಿಮಿನೇಟರ್ನಲ್ಲಿ ಗುಜರಾತ್ ಟೈಟನ್ಸ್ನ್ನು ಮಣಿಸಿ ಇಲ್ಲಿ ತಲುಪಿದೆ.
ಇನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈವರೆಗೆ 42 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 21 ಬಾರಿ ಗೆದ್ದಿದೆ. ಚೇಸಿಂಗ್ ಮಾಡಿದ ತಂಡವೂ 21 ಬಾರಿ ಜಯಗಳಿಸಿದೆ. ಈ ಆವೃತ್ತಿಯಲ್ಲಿ ಈ ಪಿಚ್ನಲ್ಲಿ 7 ಪಂದ್ಯಗಳು ನಡೆದಿದ್ದು, ಅವುಗಳಲ್ಲಿ 6 ಬಾರಿ ಮೊದಲು ಬ್ಯಾಟ್ ಮಾಡಿದ ತಂಡವೇ ಜಯವಂದಿಸಿದೆ. ಈ ಪಿಚ್ನಲ್ಲಿ ಗರಿಷ್ಠ ಸ್ಕೋರ್ 243 ರನ್, ಯಶಸ್ವಿ ಚೇಸ್ 204 ರನ್ ಇದೆ. 2023ರ ಫೈನಲ್ನಲ್ಲಿ ಇದೇ ಮೈದಾನದಲ್ಲಿ ಚೆನ್ನೈ 170 ರನ್ ಚೇಸ್ ಮಾಡಿ ಐದನೇ ಬಾರಿ ಚಾಂಪಿಯನ್ ಆಗಿತ್ತು.
ಐಪಿಎಲ್ 2025ರ ಫೈನಲ್ಗೆ ಇಂದಿನ ಪಂದ್ಯದಿಂದಲೇ ಪ್ರವೇಶ. ಪಂಜಾಬ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ – ಯಾರಿಗೆ ಭಾಗ್ಯ ಒಲಿಯಲಿದೆ? ಎಂಬುದನ್ನು ಕಾದುನೋಡಬೇಕಿದೆ.