ಕೊರಟಗೆರೆ :
ಬೆಂಗಳೂರಿನ ಹಿರಿಯ ವಕೀಲ ಸದಾಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ಕೊರಟಗೆರೆಯ ವಕೀಲರ ಸಂಘದಿಂದ ಇಂದು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ ಏಪ್ರಿಲ್ 15 ರಂದು ಹಿರಿಯ ವಕೀಲ ವೈ.ಆರ್.ಸದಾಶಿವ ರೆಡ್ಡಿಯವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ಕೊರಟಗೆರೆಯಲ್ಲಿಯೂ ವಕೀಲರ ಸಂಘದಿಂದ ಕೆಂಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಮಾತನಾಡಿ, ಕಕ್ಷಿದಾರನ ಪರವಾಗಿ ವಾದ ಮಾಡುವುದು ವಕೀಲರ ಕರ್ತವ್ಯ. ಹಿರಿಯ ವಕೀಲರ ಕಚೇರಿಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಕಿಡಿಗೇಡಿಗಳ ವಿರುದ್ದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ, ಭಯದ ವಾತಾವರಣದಲ್ಲಿ ವಕೀಲರು ಕೆಲಸ ಮಾಡುವ ದುಸ್ಥಿತಿ ನಿರ್ಮಾಣ ಆಗಿದೆ. ಹಿರಿಯ ವಕೀಲರ ಮೇಲೆ ಪೈಪ್ ನಿಂದ ಹಲ್ಲೆಮಾಡಿ ಜೀವ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರಿಗೆ ಇನ್ನಷ್ಟು ಭದ್ರತೆಯನ್ನು ಸರ್ಕಾರ ಒದಗಿಸಬೇಕು ಎಂದರು.
ಇನ್ನು ಮೌನ ಪ್ರತಿಭಟನೆಯಲ್ಲಿ ವಕೀಲರಾದ ಮಧುಸೂಧನ್, ಶಿವಕುಮಾರ್, ಕೋಮಲ್ ಗಿರೀಶ್, ತಿಮ್ಮೇಶ್, ತಿಮ್ಮರಾಜು, ಶಿಲ್ಪಾ, ತಿಮ್ಮರಾಜಮ್ಮ, ಅನುಷ ಸೇರಿದಂತೆ ಇತರರು ಹಾಜರಿದ್ದರು.