ಪಾವಗಡ:
ಜೀತವಿಮುಕ್ತರ ಸಮಗ್ರ ಪುನರ್‌ವಸತಿಗಾಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ ಎಂದು ಆಗ್ರಹಿಸಿ ಜೀವಿಕ ಸಂಘಟನೆ ಪ್ರತಿಭಟನೆ ನಡೆಸಿದರು. ಪಾವಗಡ ಪಟ್ಟಣದ ತಾಲೂಕು ಕಚೇರಿ ಮಂದೆ ಪ್ರತಿಭಟನೆ ಮಾಡಿ ತಹಶೀಲ್ದಾರ್ ಡಿ.ಎನ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಡಿ ಟಿ ಸಂಜೀವ ಮೂರ್ತಿ, ಕೆ ನರಸಿಂಹಮೂರ್ತಿ, ಟಿ ಹನುಮಂತರಾಯಪ್ಪ, ರಾಮಾಂಜಿನಪ್ಪ, ಮಂಗಳವಾಡ ಹನುಮಂತ ಸೇರಿದಂತೆ ಹಲವರು ಹಾಜರಿದ್ದರು.
ಜೀವಿಕ ಸಂಘಟನೆಯು ಪ್ರತಿಭಟನೆ ನಡೆಸಿದ ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ತಾಲೂಕು ಸಂಚಾಲಕರಾದ ಟಿ ಹನುಮಂತರಾಯಪ್ಪ ಇಂದಿಗೂ ಜೀತ ವಿಮುಕ್ತಿದಾರರ ಬಳಿ ಬಿಪಿಎಲ್ ಕಾರ್ಡ್ ವ್ಯವಸ್ಥೆ ಇಲ್ಲ, ಹಾಗೂ ಬೃಹತ್ ಸೋಲಾರ್ ಪಾರ್ಕ್ ನಲ್ಲಿ ಇರುವ ಸೆಕ್ಯೂರಿಟಿ ಕೆಲಸಗಳನ್ನು ಕೊಡಿಸುವಲ್ಲೂ ಸಹ ವಿಫಲರಾಗ್ತಿದ್ದು, ಇರೋ ಕೆಲಸಗಳೆಲ್ಲ ಆಂಧ್ರದವರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಡಿ.ಟಿ ಸಂಜೀವ್ ಮೂರ್ತಿ ಮಾತನಾಡಿ ಈ ಬಾರಿಯ ಬಜೆಟ್ ನಲ್ಲಿ 500 ಕೋಟಿ ನಿಗದಿ ಪಡಿಸಿ ಕೇಂದ್ರ ಸರ್ಕಾರ ಎಸ್ಓಪಿ ಸೆಕ್ಷನ್ ಹಿಂಪಡೆಯಬೇಕು. ಜೀತದಾಳುಗಳಿಗೆ ಅದೇ ರೀತಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು, 2017ರಿಂದ ಇಲ್ಲಿಯವರೆಗೂ ಅರ್ಜಿ ಸಲ್ಲಿಸಿದ ಜೀತದಾಳುಗಳಿಗೆ ಜೀತದಾಳುಗಳೆಂದು ತೀರ್ಮಾನಿಸಿ ಒಂದು ವಾರದೊಳಗೆ ಬಿಡುಗಡೆ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಮಂಜಿನಪ್ಪ ಮಾತನಾಡಿ ತಾಲೂಕಿನಲ್ಲಿ ಇರುವ ಸರ್ಕಾರಿ ಜಾಗಗಳನ್ನು ಪ್ರಭಾವಿಗಳು ದಬ್ಬಾಳಿಕೆ ಮಾಡಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಸರ್ಕಾರಿ ಜಾಗಗಳನ್ನು ಗುರುತಿಸಿ ಜೀತದಾಳುಗಳಿಗೆ ನಿವೇಶನಗಳ ವ್ಯವಸ್ಥೆ ನೀಡಬಹುದು ಆದರೆ ಇಲ್ಲಿ ಇಂತಹ ಕೆಲಸಗಳು ನಡೆಯುತ್ತಿಲ್ಲ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.