ತುಮಕೂರು: ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಪ್ರಗತಿಪರರಿಂದ ಪ್ರತಿಭಟನೆ..!

ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯ್ತು.
ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯ್ತು.
ತುಮಕೂರು

ತುಮಕೂರು : 

ಗುಬ್ಬಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಹೋರಾಟಗಾರರಿಗೆ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಬೆದರಿಕೆ ಹಾಕಿದ್ದು, ಈ ಕೂಡಲೇ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಇಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಚಳುವಳಿಯ ಮೇಲೆ ದಾಳಿ ಮಾಡಿ, ಬೆದರಿಕೆ ಹಾಕಿರುವ ಗುಬ್ಬಿ ಶಾಸಕರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಗುಬ್ಬಿ ತಾಲೂಕಿನ ಭೂ ಹಗರಣ ಹಾಗೂ ಭ್ರಷ್ಟಾಚಾರವನ್ನು ಸರ್ಕಾರ ಕೂಡಲೇ ಸೂಕ್ತ ತನಿಖೆ ನಡೆಸಬೇಕು. ಸಾರ್ವಜನಿಕವಾಗಿ ಸ್ಪಂದಿಸದ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ರೈತರ ಮೇಲೆ ಹಾಕಿರುವ ಮೊಕ್ಕದ್ದಮೆ ವಾಪಸ್ ಪಡೆಯಬೇಕು ಹಾಗೂ ತಕ್ಷಣವೇ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗುಬ್ಬಿಶಾಸಕ ಶ್ರೀನಿವಾಸ್ ದುರಹಂಕಾರದಿಂದ ಮಾತನಾಡುವುದನ್ನು ನಿಲ್ಲಿಸಬೇಕು, ಅವರನ್ನು ಗೆಲ್ಲಿಸಿರುವ ಜನತೆಗೆ ಗೌರವ ಕೊಡಬೇಕು. 5 ಬಾರಿ ಗೆದ್ದಿರುವ ಶಾಸಕ ಈ ರೀತಿ ಮಾತನಾಡುವುದು ಸರಿಯಲ್ಲ. ಜನರ ಕಷ್ಟಗಳನ್ನು ಅರಿತು ಬಗೆಹರಿಸಬೇಕಾದ ಅವರೇ ಈ ರೀತಿ ಮಾತನಾಡಿದರೆ ಅದು ತಪ್ಪಾಗುತ್ತದೆ. ರೈತರನ್ನು ಕೀಳಾಗಿ ನೋಡುವುದು ಸರಿಯಲ್ಲ ರೈತರು ಇಚ್ಚಿಸಿದರೆ ಅವರಿಗೆ ಇರುವ ಅಧಿಕಾರದ ಮದವನ್ನು ಇಳಿಸುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಆರ್ ಶ್ರೀನಿವಾಸ್ ರವರು ಅಧಿಕಾರದ ಮದದಲ್ಲಿದ್ದಾರೆ. ನನಗೂ ಅಧಿಕಾರ ಬೇಕು ಹೆಂಡತಿಗೆ ಅಧಿಕಾರ ಬೇಕು. ಮಕ್ಕಳಿಗೂ ಅಧಿಕಾರ ಬೇಕು ಎಂದು ಓಡಾಡುತ್ತಿದ್ದಾರೆ. ಅವರು ಇದೇ ರೀತಿ ಮುಂದುವರಿದರೆ ಜನರು ಅವರನ್ನು ಕೈ ಬಿಡುವುದರಲ್ಲಿ ಯಾವುದೇ ಸಂದೇಹವಿಲ್ಲ. ರೈತ ಸಂಘಟನೆಯ ಬಗ್ಗೆ, ರೈತರ ಬಗ್ಗೆ ಏಕವಚನದಲ್ಲಿ ಮಾತನಾಡಿ ಕ್ರಿಮಿನಲ್ ಪದ ಬಳಸಿರುವುದು ತಪ್ಪು. ಇದರ ಬಗ್ಗೆ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇನ್ನು ರೈತ ಮುಖಂಡರ  ಬಗ್ಗೆ ಏಕವಚನದಲ್ಲಿ ಮಾತನಾಡಿ ಕ್ರಿಮಿನಲ್ ಪದ ಬಳಸಿದ ಶಾಸಕ ಎಸ್ಆರ್ ಶ್ರೀನಿವಾಸ್ ವಿರುದ್ಧ ಕ್ರಮ ಜರುಗಿಸುವಂತೆ ಗುಬ್ಬಿ ತಹಶೀಲ್ದಾರ್ ಆರತಿ ಅವರಿಗೆ ಮನವಿ ನೀಡಲು ಹೋದರೆ ರೈತರ ಮನವಿಯನ್ನು ನಿರಾಕರಿಸಿ ರೈತರ ಮನಸ್ಸಿಗೆ ಧಕ್ಕೆ ಉಂಟು ಮಾಡಿದ್ದಾರೆ. ಗುಬ್ಬಿ ತಹಶೀಲ್ದಾರ್ ಅವರಿಗೆ ಶ್ರೀನಿವಾಸ್ ಅವರ ಮೇಲೆ ಅಷ್ಟೊಂದು ಗೌರವ, ಪ್ರೀತಿ ಇದ್ದರೆ ಅವರು ತಹಶೀಲ್ದಾರ್‌ ಕೆಲಸಕ್ಕೆ ರಾಜೀನಾಮೆ ನೀಡಿ ಎಸ್ಆರ್ ಶ್ರೀನಿವಾಸ್ ಅವರ ವ್ಯವಹಾರಗಳನ್ನು ನೋಡಿಕೊಳ್ಳಲಿ. ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಐದು ವರ್ಷದಲ್ಲಿ ಬಂದೋಗುವಂತಹ ಶಾಸಕರಿಗೆ ಅಡಿಯಾಳಾಗುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಈ ವೇಳೆ ಸಿಪಿಎಮ್  ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಪ್ರಕಾಶ್‌ ಮಾತನಾಡಿ, ಶ್ರೀನಿವಾಸ್ ತುಂಬಾ ಬುದ್ಧಿವಂತರು. ಐದು ಬಾರಿ ಗೆದ್ದಿದ್ದಾರೆ. ಆದರೆ ಅವರು ಈ ರೀತಿ ಅವಿದ್ಯಾವಂತರಂತೆ ಮಾತನಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿಯಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅದೇನೇ ಇರಲಿ.. ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರ ಜೊತೆ ಶಾಸಕರು ನಡೆದುಕೊಂಡಿರೋ ರೀತಿಗೆ ಇದೀಗ ಭಾರೀ ಖಂಡನೆ ವ್ಯಕ್ತವಾಗ್ತಿದೆ. ಈ ವಿಚಾರವಾಗಿ ಎಸ್‌.ಆರ್‌.ಶ್ರೀನಿವಾಸ್‌ ವಿರುದ್ಧ ದೂರು ಕೂಡ ದಾಖಲಾಗಿದ್ದು, ಇದೀಗ ಪ್ರತಿಭಟನೆ ಕೂಡ ನಡೆದಿದೆ. ಪೊಲೀಸ್‌ ಇಲಾಖೆ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

Author:

...
Editor

ManyaSoft Admin

share
No Reviews