ಪಾವಗಡ:
ಮೂಲಭೂತ ಸೌಕರ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಇಂದು ಕೂಡ ಮುಷ್ಕರ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮುಷ್ಕರದಲ್ಲಿ ತಿಮ್ಮಾರೆಡ್ಡಿ, ರಘುವೀರ್, ರಾಘವೇಂದ್ರರೆಡ್ಡಿ, ರಂಜಿತ್ ಕುಮಾರ್, ಇಮಾಮ್, ಶ್ರೀನಿವಾಸ್ ಮೂರ್ತಿ, ಷಣ್ಮುಖರಾದ್ಯ, ಸಂಜಯ್, ಆಸಿಫ್, ಈರಣ್ಣ ಸೇರಿದಂತೆ ಇತರರು ಭಾಗಿಯಾಗಿದ್ದರು.
ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಈ ಹಿಂದೆ ಅಕ್ಟೋಬರ್ 3ರಂದು ಪ್ರತಿಭಟನೆ ನಡೆಸಿದ್ದು, ಅಂದು ಸರ್ಕಾರ ಅಧಿಕಾರಿಗಳ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು, ತದನಂತರ ಭರವಸೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆ ಕಳೆದ 6 ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ಮುಷ್ಕರ ಕೈಗೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ರಾಜೇಶ್, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್ನೆಟ್ ಹಾಗೂ ಸ್ಕ್ಯಾನರ್ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟವಧಿ ಮುಷ್ಕರಕ್ಕೆ ಸಾರ್ವಜನಿಕರು ಕೂಡ ಬೆಂಬಲ ನೀಡಿದ್ದು, ಅಧಿಕಾರಿಗಳ ಹೋರಾಟಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.