ಪಾವಗಡ:
ಗಡಿ ತಾಲೂಕು ಪಾವಗಡ ಅಂದರೆ ಮೊದಲು ನೆನಪಾಗೋದು ಶ್ರೀ ಶನೇಶ್ವರ ಸ್ವಾಮಿ. ಈ ದೇವಾಲಯಕ್ಕೆ ತುಮಕೂರು ಜಿಲ್ಲೆ ಮಾತ್ರವಲ್ಲದೇ ಬೇರೆ ಜಿಲ್ಲೆ, ನೆರೆಯ ಆಂಧ್ರದಿಂದಲೂ ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಂದು ಮಾಘ ಮಾಸದ ಶುದ್ಧ ಹುಣ್ಣಿಮೆ ಅಂಗವಾಗಿ ಶನೇಶ್ವರ ಸ್ವಾಮಿ ದೇವರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಶ್ರೀ ಶನೇಶ್ವರ ಸ್ವಾಮಿ ರಥೋತ್ಸವಕ್ಕೆ ಶಾಸಕ ಎಚ್.ವಿ ವೆಂಕಟೇಶ್ ಅವರು ಚಾಲನೆ ನೀಡಿದ ಬಳಿಕ ಭಕ್ತರು ರಥವನ್ನು ಎಳೆದರು. ರಥೋತ್ಸವದ ವೇಳೆ ಎಸ್ ಎಸ್ ಕೆ ಸಂಘದ ಅಧ್ಯಕ್ಷ ಆನಂದ್ ರಾವ್ ಸೇರಿ ಇತರೆ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. ರಥ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ರಥಕ್ಕೆ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಇನ್ನು ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಹಾಗೂ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ಮಾಡಲಾಯ್ತು. ರಥೋತ್ಸವಕ್ಕೆ ಸಾವಿರಾರು ಮಂದಿ ಭಾಗಿಯಾಗಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಶನೇಶ್ವರ ಸ್ವಾಮಿಯ ಅರ್ಚಕರು ಈ ದೇಗುಲ ಸ್ಥಾಪನೆಯಾಗಿ 70 ವರ್ಷ ಪೂರ್ಣಗೊಂಡಿದ್ದು, 60 ವರ್ಷದಿಂದ ರಥೋತ್ಸವ ಮಾಡಲಾಗ್ತಿದ್ದು, ಇಡೀ ರಾಜ್ಯಾದ್ಯಂತ ಭಕ್ತರು ಬಂದು ಇಲ್ಲಿ ಪೂಜೆ ಸಲ್ಲಿಸಿ ಭಕ್ತಿಗೆ ಪಾತ್ರರಾಗ್ತಾರೆ ಎಂದರು.