ಪಾವಗಡ:
ಬಹು ಸಂಸ್ಕೃತಿಯ ನಾಡು ನಮ್ಮ ನಾಡಿನಲ್ಲಿ ಸಮುದಾಯದ ಭಾಷೆಗೆ ಅನುಗುಣವಾಗಿ ಶಾಲೆಗಳನ್ನು ತೆರೆಯಲಾಗಿದೆ. ನಮ್ಮ ಕರ್ನಾಟಕದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಅಲ್ಲದೇ ಕನ್ನಡ ಮಾಧ್ಯಮದ ಜೊತೆಗೆ ಉರ್ದು, ಸಂಸ್ಕೃತ, ಹಿಂದೆ ಭಾಷೆಗಳಲ್ಲಿ ಮಕ್ಕಳು ಕಲಿಯಲೆಂದು ಶಾಲೆಯನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಉರ್ದು ಮಾದರಿಯ ಶಾಲೆಯನ್ನು ತೆರೆಯಲಾಗಿದೆ. ಗಡಿ ತಾಲೂಕು ಪಾವಗಡದಲ್ಲೂ ಮುಸ್ಲಿಂ ಜನಾಂಗದ ಒಂದರಿಂದ ಏಳನೇ ತರಗತಿವರೆಗೂ ಉರ್ದು ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿತ್ತು. ಆದರೀಗ ಪಾವಗಡ ಪಟ್ಟಣದಲ್ಲಿರೋ ಹಳೆಯ ಉರ್ದು ಶಾಲೆಯನ್ನು ತೆರವು ಮಾಡಿ ಮೌಲಾನಾ ಅಬ್ದುಲ್ ಕಲಾಂ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾವಗಡ ಪಟ್ಟಣದಲ್ಲಿ ಒಂದೇ ಒಂದು ಉರ್ದು ಶಾಲೆ ಇದೆ. ಇದು ತುಂಬಾ ಹಳೆಯ ಶಾಲೆ ಆಗಿದೆ. ಇತಿಹಾಸ ಇರೋ ಉರ್ದು ಶಾಲೆಯನ್ನು ತೆರವು ಮಾಡಿ, ಈ ಜಾಗದಲ್ಲಿ ಬಂದ ಅನುದಾನದಲ್ಲಿ ಮೌಲಾನಾ ಅಬ್ದುಲ್ ಕಲಾಂ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, SDMC ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಪ್ರತಿಭಟನೆ ನಡೆಸಿ ಶಾಲೆಯನ್ನು ತೆರವು ಮಾಡದಂತೆ ಆಗ್ರಹಿಸಿದರು. ಪ್ರತಿಭಟನೆ ಬಳಿಕ ECO ಶಿವಕುಮಾರ್‌ಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಉರ್ದು ಶಾಲೆಯನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡಬೇಕೆಂದು ಒತ್ತಾಯ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರಾದ ಹಿದಾಯತ್, ಈ ಉರ್ದು ಶಾಲೆಯಲ್ಲಿ ಓದಿ ನ್ಯಾಯಾಧೀಶರು, ವಕೀಲರು. ಡಾಕ್ಟರ್ ಇಂಜಿನಿಯರ್ಸ್ ಗಳು ಆಗಿರುತ್ತಾರೆ. ಇಂತಹ ಶಾಲೆ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಸ್ಥಳೀಯ ಮುಖಂಡ ಖಾಲಿದ್ ಅಹ್ಮದ್ ಮಾತನಾಡಿ ತಾಲೂಕಿನಲ್ಲಿರುವ ಏಕೈಕ ಉರ್ದು ಶಾಲೆ ಇದನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರುತ್ತದೆ. ಮುಂದಿನ ದಿನಗಳಲ್ಲಿ ಉರ್ದು ಶಾಲೆ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚು ಪಡಿಸಬೇಕು ಹಾಗೂ ಶಾಲೆಯಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಸ್ಥಳೀಯರು ಪೋಷಕರು ಒಗ್ಗೂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕು ಎಂದರು.