ಮೃತ ವಿದ್ಯಾರ್ಥಿನಿ ಮೈಥಿಲಿತುಮಕೂರು
ಪಾವಗಡ : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು , ಯುವಕ ಯುವತಿಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಚಾಮರಾಜನಗರದಲ್ಲಿ 9 ವರ್ಷದ ತೇಜಸ್ವಿನಿ ಹೃದಯಾಘಾತಕ್ಕೆ ಸಾವನ್ನಪ್ಪಿದ್ರೆ, ಕಳೆದ ವಾರ ತುಮಕೂರಿನಲ್ಲಿ ಡಿಗ್ರಿ ವಿದ್ಯಾರ್ಥಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದ. ಈಗ ಇಂತಹದ್ದೇ ಒಂದು ಘಟನೆ ಪಾವಗಡದಲ್ಲಿ ನಡೆದಿದೆ.
ಪಾವಗಡ ಪಟ್ಟಣದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ಹೃದಯಾಘಾತದಿಂದ ನಿನ್ನೆ ಸಾವನ್ನಪ್ಪಿದ್ದು, ಪಾವಗಡದ ಶ್ರೀಮತಿ, ಶ್ರೀ ವೈ. ಈ ರಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ಮೈಥಿಲಿ ಎಂಬ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಮೂಲತಃ ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ ನಿನ್ನೆ ಕಾಲೇಜು ಮುಗಿಸಿ ಪಟ್ಟಣದ ಕಡೆ ಬರುವಾಗ ಸುಸ್ತಾಗಿ ಏಕಾಏಕಿ ಕುಸಿದುಬಿದ್ದಿದ್ದು , ಕೂಡಲೇ ಯುವತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ.
ಆ ಯುವತಿಗೆ ಮೊದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ಹೇಳಲಾಗಿದ್ದು, ಆಸ್ಪತ್ರೆ ಬಳಿ ಜಮಾಯಿಸಿದ ವಿದ್ಯಾರ್ಥಿನಿ ಮೈಥಿಲಿಯ ಸ್ನೇಹಿತರು, ಪ್ರಾಧ್ಯಾಪಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ವಿದ್ಯಾರ್ಥಿನಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ಮೃತ ವಿದ್ಯಾರ್ಥಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರುಗಳು ಸೇರಿದಂತೆ ವಿದ್ಯಾರ್ಥಿ ಬಳಗ ಸಂತಾಪ ಸೂಚಿಸಿದರು.