ಪಾವಗಡ :
ಗಡಿ ತಾಲೂಕು ಪಾವಗಡ ತಾಲೂಕು ಅದೆಷ್ಟೋ ಹಿಂದುಳಿದಿದೆ ಎಂದರೆ ತಾಲೂಕಿನ ಹಳ್ಳಿಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಮರೀಚಿಕೆಯಾಗಿದೆ. ಗ್ರಾಮಗಳಲ್ಲಿ ಚರಂಡಿ, ರಸ್ತೆ ಇಲ್ಲದೇ ಗ್ರಾಮದ ನಿವಾಸಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಪಾವಗಡ ತಾಲೂಕಿನ ವೈಎನ್ ಹೊಸಕೇಟೆ ಹೋಬಳಿ ವ್ಯಾಪ್ತಿಯ ಜಾಲೋಡು ಗ್ರಾಮದಲ್ಲಿ ಸರಿಯಾದ ಚರಂಡಿಯೂ ಇಲ್ಲ, ರಸ್ತೆಯೂ ಇಲ್ಲ, ರಸ್ತೆಗಳ ತುಂಬಾ ಗುಂಡಿಗಳು ಬಿದ್ದಿದ್ದು ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ವ್ಯಾಪ್ತಿಯಲ್ಲಿ ಮೊನ್ನೆ ಮಳೆ ಸುರಿದಿದ್ದು ಒಂದೇ ಮಳೆಗೆ ಜಾಲೋಡು ಗ್ರಾಮದ ಮನೆಗಳ ಮುಂದೆ ನೀರು ನಿಂತಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರೋದರಿಂದ ಮಳೆ ನೀರು ಹೋಗಲು ಸಾಧ್ಯವಾಗದೇ ಮನೆ ಮುಂದೆ ಈಜುಕೊಳ ಸೃಷ್ಟಿಯಾಗಿದೆ. ಇದಲ್ಲದೇ ಗ್ರಾಮದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಮಳೆಗೆ ಕೆಸರು ಗದ್ದೆಯಾಗಿದೆ. ಇದರಿಂದ ವಾಹನಗಳು ಓಡಾಡೋದೇ ಕಷ್ಟ ಆಗಿದೆ. ಅದೆಷ್ಟು ಬಾರೀ ಮನವಿ ಮಾಡಿದರೂ ಅಧಿಕಾರಿಗಳು ಗ್ರಾಮದತ್ತ ಸುಳಿಯುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ, ಇದಿಷ್ಟು ಅಲ್ಲದೇ ಫಸಲಿಗೆ ಬಂದಿದ್ದ ಬೆಳೆ ಒಂದೇ ಮಳೆಗೆ ನೆಲಕಚ್ಚಿದ್ದು ರೈತರು ಕಂಗಾಲಾಗಿದ್ದಾರೆ.
ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮಳೆಗಾಲ ಆರಂಭವಾಗುವಷ್ಟರಲ್ಲಿ ಗ್ರಾಮದ ಚರಂಡಿಗಳನ್ನು ಹಾಗೂ ರಸ್ತೆಯಲ್ಲಿರೋ ಗುಂಡಿಗಳಿಗೆ ಮುಕ್ತಿ ಕೊಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾ ಇದ್ದಾರೆ.